ಬೆಂಗಳೂರು(ಸೆ.11): ಕಾವೇರಿ ನೀರಿನ ಗದ್ದಲ ಕರ್ನಾಟಕ ಬಂದ್‌ ನಂತರ ಒಂದು ಹಂತಕ್ಕೆ ಬರುತ್ತಿದ್ದಂತೆ ಸದ್ದಿಲ್ಲದೆ ನಿಗಮ, ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಕಸರತ್ತು ಗರಿಗೆದರಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೆ.24ರಂದು ದಿಲ್ಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ ಸೂಚಿಸಿದಂತೆ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯಲ್ಲಿ ಮಾರ್ಪಾಡು ಮಾಡಿ, ಅದಕ್ಕೆ ಒಪ್ಪಿಗೆ ಪಡೆಯಲಿದ್ದಾರೆ. ಇದಕ್ಕೂ ಮುನ್ನ ಪಟ್ಟಿಯಲ್ಲಿ ಸೇರಿಸಿರುವ ಕೆಲವು ಶಾಸಕರ ಹೆಸರು ಕೈ ಬಿಟ್ಟು ಪಕ್ಷದ ಕಾರ್ಯಕರ್ತರನ್ನು ಸೇರಿಸುವ ಅಂತಿಮ ಕಸರತ್ತು ನಡೆಸಬೇಕಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕದಲ್ಲಿ ಶಾಸಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಹಾಗೂ ನೇಮಕ ಮಾಡಲು ಅನುಸರಿಸಿರುವ ಮಾನದಂಡಗಳನ್ನು ಸರಿಪಡಿಸಬೇಕೆಂದು ಇತ್ತೀಚಿಗೆ ದಿಲ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದರು.

ಕೆಪಿಸಿಸಿ ಅಧ್ಯಕ್ಷರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಜತೆ ಮಧ್ಯಾಹ್ನ ರಾಹುಲ್‌ ಗಾಂಧಿ ಅವರನ್ನೂ ಒಳಗೊಂಡ ರಾಜ್ಯದ ನಾಯಕರಿಗೆ ರಾಹುಲ್‌ಗಾಂಧಿ ಸೂಕ್ತ ಸೂಚನೆಗಳನ್ನು ನೀಡಿದ್ದರು. ಹೀಗಾಗಿ ಬಹು ನಿರೀಕ್ಷಿತ ನಿಗಮ, ಮಂಡಳಿ ನೇಮಕ ಪ್ರಕ್ರಿಯೆ ಸ್ಥಗಿತವಾಗಿತ್ತು.

ಗೌರಿ, ಗಣೇಶ ಹಬ್ಬಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಹಿರಿಯ ಸಚಿವರು ಸೇರಿ ನಿಗಮ, ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅದರಲ್ಲೂ ಸಂಪುಟ ಪುನಾರಚನೆ ವೇಳೆ ಅತೃಪ್ತರಾಗಿದ್ದವರೂ ಸೇರಿದಂತೆ ಕೆಲವು ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಜಾತಿ, ಪ್ರದೇಶವಾರು ಲೆಕ್ಕಾಚಾರದಲ್ಲಿ ಅನೇಕ ಶಾಸಕರು ಸ್ಥಾನ ಪಡೆದಿದ್ದಾರೆ. ಇದಕ್ಕೆ ರಾಹುಲ್‌ಗಾಂಧಿ ಅವರು ಒಪ್ಪದ ಕಾರಣ ಈಗ ಹಳೇ ಪಟ್ಟಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಶಾಸಕರನ್ನು ಕೈಬಿಡಬೇಕಾಗುತ್ತದೆ. ಈ ಪಕ್ರಿಯೆ ಮುಂದಿನ ವಾರದ ವೇಳೆಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಸೆ.21ರ ನಂತರ ರಾಹುಲ್‌ಗಾಂಧಿ ಅವರು ಉತ್ತರ ಪ್ರದೇಶದ ಪ್ರವಾಸ ಕಾರ್ಯಕ್ರಮ ಮುಕ್ತಾಯವಾಗಲಿದೆ. ಆನಂತರ 24 ಅಥವಾ 25ರ ವೇಳೆಗೆ ಸಿದ್ದರಾಮಯ್ಯ ಅವರು ಭೇಟಿ ಸಮಯ ಪಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ತಲೆನೋವಾಗಿರುವ ನಿಗಮ, ಮಂಡಳಿ ಪ್ರಕ್ರಿಯೆ ಮುಕ್ತಾಯಗೊಳಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.