Asianet Suvarna News Asianet Suvarna News

ಕೇಂದ್ರ ಬಜೆಟ್: ಯಾವ್ಯಾವ ಕ್ಷೇತ್ರಗಳಿಗೆ ಏನೇನು ನಿರೀಕ್ಷೆ?

ಈ ಬಾರಿಯ ಬಜೆಟ್ ನಾನಾ ಕಾರಣಕ್ಕೆ ಕುತೂಹಲ ಮತ್ತು ನಿರೀಕ್ಷೆಯ ಭಾರ ಹೊತ್ತಿರುವುದು ನಿಜ. ನೋಟು ರದ್ದತಿ ಪರಿಣಾಮ ಮತ್ತು ಜಿಎಸ್'ಟಿ ಜಾರಿಯಂಥ ದೊಡ್ಡ ಸವಾಲನ್ನು ಎದುರಿಗಿಟ್ಟುಕೊಂಡಿರುವ ಕೇಂದ್ರ ಸರಕಾರ, ಮೊದಲ ಬಾರಿಗೆ ರೈಲ್ವೆ ಮತ್ತು ಸಾಮಾನ್ಯ ಬಜೆಟ್'ಗಳನ್ನು ಒಟ್ಟಿಗೇ ಮಂಡಿಸಲಿದೆ. ಜನಸಾಮಾನ್ಯರಿಗೆ ತೆರಿಗೆ ವಿನಾಯಿತಿ ಮತ್ತಿತರ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇದೆ. ಹಾಗಾದರೆ ನಾನಾ ಕ್ಷೇತ್ರಗಳಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಕುರಿತು ಏನೆಲ್ಲಾ ನಿರೀಕ್ಷೆ ಇರಬಹುದು ಎಂಬುದರತ್ತ ಇಣುಕುನೋಟ ಇಲ್ಲಿದೆ.

general budget expectations by various sectors

ಉಕ್ಕು:
ಇತ್ತೀಚಿನ ವರ್ಷಗಳಲ್ಲಿ ಆಮದು ಮಾಡಿಕೊಳ್ಳುತ್ತಿರುವ ಸರಕಿನಲ್ಲಿ ಉಕ್ಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರ ಸಾಕಷ್ಟುಸುಧಾರಣೆಗಳ ನಿರೀಕ್ಷೆ ಹೊತ್ತಿದೆ. ಆಮದು ಹೆಚ್ಚಾಗುವಂಥ ಹಾಗೂ ಸ್ಥಳೀಯ ಉಕ್ಕು ಕೈಗಾರಿಕೆಗಳಿಗೆ ಹೊರೆ ಎನಿಸುವಂಥ ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ ಸಾಕು, ಸುಧಾರಣೆ ಸಾಧ್ಯವಾಗದಿದ್ದರೂ ಪರವಾಗಿಲ್ಲ ಎನ್ನುತ್ತವೆ ಈ ಕ್ಷೇತ್ರದ ಮೂಲಗಳು.

ಇಂಧನ:
ತೆರಿಗೆ ಸುಧಾರಣೆ ಮೂಲಕವೇ ನವೀಕರಿಸಬಹು­ದಾದ ಇಂಧನ ಕ್ಷೇತ್ರವನ್ನು ಹೆಚ್ಚು ಪ್ರಚಾರ ಮತ್ತು ಬಳಕೆಗೆ ಬರುವಂತೆ ಮಾಡಬೇಕೆಂಬ ನಿರೀಕ್ಷೆ ಈ ಕ್ಷೇತ್ರದ್ದು. ಸೋಲಾರ್‌ ಪಾರ್ಕ್ಗಳ ವಿಷಯದಲ್ಲಿ ಸರ್ಕಾರ ತಳೆದಿರುವ ಧೋರಣೆ ಬದಲಾಯಿಸಿ­ಕೊಂಡು, ಕೊಂಚ ರಿಯಾಯಿತಿ ತೋರಿಸಿದರೆ ಈ ಸೌರಶಕ್ತಿ ಬಳಕೆ ತನ್ನಿಂತಾನೇ ಹೆಚ್ಚಿಸಬಹುದು ಎಂಬ ನಿರೀಕ್ಷೆಯೂ ಇದೆ. ಅಲ್ಲದೆ, ಸೋಲಾರ್‌ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಿದರೆ ಒಳಿತು ಎಂಬುದು ಇಂಧನ ಕ್ಷೇತ್ರದ ಲೆಕ್ಕಾಚಾರ.

ಮೂಲಸೌಕರ್ಯ:
ಈ ಬಾರಿಯ ಬಜೆಟ್‌ನಿಂದ ಅತ್ಯಂತ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವುದು ಮೂಲಸೌಕರ್ಯ ಕ್ಷೇತ್ರ. ರಸ್ತೆ ಮತ್ತು ಹೆದ್ದಾರಿ ಸಚಿವಾಲಯವಂತೂ ಈ ಹಿಂದಿಗಿಂತಲೂ ಶೇ.30ರಷ್ಟುಹೆಚ್ಚು ಅನುದಾನ ನಿರೀಕ್ಷೆ ಮಾಡಿದೆ. ಅಲ್ಲದೆ, ಶೇ.10ರಷ್ಟಾದರೂ ಹೆಚ್ಚು ಅನುದಾನ ಕೊಟ್ಟಲ್ಲಿ ಗ್ರಾಮೀಣ ವಸತಿ, ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ. ಒಟ್ಟಾರೆ, ಸಮರ್ಪಕ ವಸತಿ ಸೌಕರ್ಯ ಕಲ್ಪಿಸುವಲ್ಲಿ ಸಾಕಷ್ಟುಅನುದಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಕ್ಷೇತ್ರ ಕಾದಿದೆ.

ಉತ್ಪಾದನಾ ಕ್ಷೇತ್ರ:
ಸದ್ಯ ಉದ್ದಿಮೆಗಳ ಆಸ್ತಿಯ ಸವಕಳಿ ದರವನ್ನು ಸರ್ಕಾರ ವಾರ್ಷಿಕ ಶೇ.15 ಎಂದು ಪರಿಗಣಿಸುತ್ತಿದೆ. ಆದರೆ ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ಔದ್ಯೋಗಿಕ ಕ್ಷೇತ್ರದಲ್ಲಿ ಯಂತ್ರ ಹಾಗೂ ಸಲಕರಣೆಗಳು ಬಹುಬೇಗ ಹಳತಾಗುತ್ತಿವೆ. ಹಾಗಾಗಿ ಸರ್ಕಾರ ಸವಕಳಿ ದರವನ್ನು ಶೇ.25 ಎಂದು ಪರಿಗಣಿಸಿದರೆ ಉತ್ಪಾದನಾ ಘಟಕಗಳು ಹೊಸ ಹೊಸ ಉಪಕರಣಗಳಲ್ಲಿ ಹೂಡಿಕೆ ಮಾಡಲು ಸಾಧ್ಯ. ಪ್ರಸ್ತುತ ಬಜೆಟ್‌ನಲ್ಲಿ ಅದನ್ನು ಪ್ರಕಟಿಸಬೇಕು ಎಂದು ಈ ಕ್ಷೇತ್ರದ ತಜ್ಞರು ಹೇಳುತ್ತಿದ್ದಾರೆ. 
ಇನ್ನು, ದೇಶದ ಉತ್ಪಾದನಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನಾ ಮತ್ತು ಅಭಿವೃದ್ಧಿ ಘಟಕಗಳು (ಆರ್‌ ಆ್ಯಂಡ್‌ ಡಿ) ಸಾಕಷ್ಟಿಲ್ಲ. ಇವುಗಳ ಸ್ಥಾಪನೆಗೆ ಉತ್ತೇಜನ ನೀಡಿದರೆ ದೇಶದ ಉತ್ಪಾದನಾ ಕ್ಷೇತ್ರ ಚೀನಾದ ಸನಿಹಕ್ಕೆ ಹೋಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಕಂಪನಿ ಕಾಯ್ದೆಯಲ್ಲಿ ಉದ್ದಿಮೆಗಳು ಪ್ರತಿವರ್ಷ ತಮ್ಮ ಲಾಭದಲ್ಲಿ ನಿರ್ದಿಷ್ಟಮೊತ್ತವನ್ನು ಸಾಮಾಜಿಕ ಸೇವೆಗೆ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಆದಾಯ ತೆರಿಗೆ ಕಾಯ್ದೆಯಲ್ಲಿ ಈ ರೀತಿಯ ಖರ್ಚುಗಳಿಗೆ ಅವಕಾಶವೇ ಇಲ್ಲ! ಈ ಲೋಪವನ್ನು ಸರಿಪಡಿಸಬೇಕೆಂದು ಉದ್ದಿಮೆಗಳು ಕೇಳಿಕೊಂಡಿವೆ. ಜಲಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಹೇಳುತ್ತಿದೆ. ಆ ಕಾರ್ಯವನ್ನು ಚುರುಕುಗೊಳಿಸಿದರೆ ಉತ್ಪಾದಿತ ಸರಕುಗಳನ್ನು ಸಾಗಣೆ ಮಾಡಲು ಅನುಕೂಲವಾಗುತ್ತದೆ ಎಂಬುದು ಉತ್ಪಾದನಾ ವಲಯದ ನಿರೀಕ್ಷೆ.

ತೈಲ, ನೈಸರ್ಗಿಕ ಅನಿಲ:
ಒಪೆಕ್‌ ರಾಷ್ಟ್ರಗಳು ಉತ್ಪಾದನಾ ನಿಯಂತ್ರಣಕ್ಕೆ ಒಪ್ಪಿಗೆ ಸೂಚಿಸಿರುವುದರಿಂದ ಸದ್ಯ ತೈಲ ಬೆಲೆ ಸಮತೋಲನಕ್ಕೆ ಬಂದಿದೆ. ಆದರೆ ಬೇರೆ ರಾಷ್ಟ್ರಗಳಿಂದ ನೈಸರ್ಗಿಕ ಅನಿಲ ತರಿಸಿಕೊಳ್ಳುವುದು ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಬಳಕೆ ಹೆಚ್ಚಳ­ ವಾಗುವಂತೆ ಸುಂಕ ಕಡಿತ ನಿರೀಕ್ಷೆಯನ್ನು ಈ ಕ್ಷೇತ್ರ ಹೊಂದಿದೆ. ತೈಲ ಕಂಪನಿಗಳಿಗೆ ವಿಧಿಸಲಾಗುತ್ತಿರುವ ತೆರಿಗೆಯಲ್ಲಿ ಮೃದುಧೋರಣೆ ತಳೆದರೆ ಉದ್ಯಮ ಬೆಳವಣಿಗೆಗೆ ಸಹಕಾರಿ ಎಂಬ ನಿರೀಕ್ಷೆಯೂ ಇದೆ.

ಆಟೊಮೊಬೈಲ್:
ನೋಟು ಅಮಾನ್ಯದಿಂದ ಬಹಳ ಸಮಸ್ಯೆಗೆ ಒಳಗಾಗಿರುವ ಕ್ಷೇತ್ರಗಳಲ್ಲಿ ಇದೂ ಒಂದು. ಹಾಗಾಗಿ ಆಟೋಮೊಬೈಲ್‌ ಉದ್ದಿಮೆಗಳು ಈ ಸಲದ ಬಜೆಟ್‌ನಿಂದ ಬಹಳ ನಿರೀಕ್ಷೆ ಹೊಂದಿವೆ. ಆಟೋಮೊಬೈಲ್‌ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಲ್ಲಿ ಶೇ.18.66ರಷ್ಟುಮಾರಾಟ ಕುಸಿತವಾಗಿದೆ. ಹಾಗಾಗಿ ಕಂಪನಿಗಳು ಕಷ್ಟದಲ್ಲಿವೆ. ಇದನ್ನು ಸರಿದೂಗಿಸಿಕೊಳ್ಳಲು ಅಬಕಾರಿ ಸುಂಕ ಕಡಿತ, ಗ್ರಾಮೀಣ ಆರ್ಥಿಕತೆಗೆ ಬಜೆಟ್‌ನಲ್ಲಿ ಉತ್ತೇಜನ ನೀಡುವುದು, ಆನ್‌ಲೈನ್‌ ಪಾವತಿಯತ್ತ ಜನರು ಮುಖ ಮಾಡುವಂತೆ ಮಾಡುವುದನ್ನು ಈ ಕ್ಷೇತ್ರ ನಿರೀಕ್ಷಿಸುತ್ತಿದೆ. ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ಅಥವಾ ತೆರಿಗೆ ವಿನಾಯ್ತಿ, ಪರಿಸರಸ್ನೇಹಿ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ, ವಿದೇಶದಿಂದ ಆಮದಾಗುವ ವಾಹನಗಳಿಗೆ ಕಸ್ಟಮ್ಸ್‌ ಸುಂಕ ಕಡಿತವನ್ನೂ ಆಟೋಮೊಬೈಲ್‌ ಕ್ಷೇತ್ರ ಎದುರುನೋಡುತ್ತಿದೆ. ಮೂಲಸೌಕರ್ಯ, ಉತ್ಪಾದನೆ, ತೆರಿಗೆ ಹಾಗೂ ಗ್ರಾಮೀಣ ಭಾಗಗಳಿಗೆ ಹೆಚ್ಚು ಗಮನ ಹರಿಸಿದರೆ ಒಟ್ಟಾರೆ ಆರ್ಥಿಕತೆ ಸುಧಾರಣೆಯಾಗಿ, ಅದರಿಂದ ಆಟೋಮೊಬೈಲ್‌ ಕ್ಷೇತ್ರವೂ ಚೇತರಿಸಿಕೊಳ್ಳುತ್ತದೆ ಎಂದು ಪ್ರಸಿದ್ಧ ಆಟೋಮೊಬೈಲ್‌ ಕಂಪನಿಗಳು ಹೇಳುತ್ತಿವೆ.

ಕೃಷಿ:
ಎಂದಿನಂತೆ ಕೃಷಿ ಕ್ಷೇತ್ರ ಈಗಲೂ ಸಂಕಷ್ಟದಲ್ಲಿದೆ. ಮುಖ್ಯವಾಗಿ ರೈತರು ಈ ಬಜೆಟ್‌ನಲ್ಲಿ ಸಾಲ ಮನ್ನಾ ಆಗಬೇಕೆಂದು ನಿರೀಕ್ಷಿಸುತ್ತಿದ್ದಾರೆ. ನೋಟು ಅಮಾನ್ಯದ ನಂತರ ಸಹಕಾರ ಸಂಘಗಳಲ್ಲಿ ರೈತರು ಯಾವುದೇ ವಹಿವಾಟು ಮಾಡಲು ಸಾಧ್ಯವಾಗುತ್ತಿಲ್ಲ. ಆ ಅಡ್ಡಿಯನ್ನು ಬಜೆಟ್‌ನಲ್ಲಿ ನಿವಾರಿಸಬೇಕು ಎಂಬ ನಿರೀಕ್ಷೆಗಳಿವೆ. ನೋಟು ಅಮಾನ್ಯದ ನಂತರ ಹಿಂಗಾರು ಬಿತ್ತನೆಗೆ ಸಮಸ್ಯೆಯಾಗಿದೆ. ಅದಕ್ಕೆ ಬಜೆಟ್‌ನಲ್ಲಿ ಪರಿಹಾರ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಬರಗಾಲದಿಂದ ಕೃಷಿ ಕ್ಷೇತ್ರಕ್ಕೆ ಅಗಣಿತ ಹಾನಿಯಾಗಿದೆ. ಇದಕ್ಕೆ ವಿಶೇಷ ಪ್ಯಾಕೇಜ್‌ ಏನಾದರೂ ಬಜೆಟ್‌ನಲ್ಲಿ ಪ್ರಕಟವಾಗಬಹುದೇ ಎಂದು ರೈತರು ಕಾಯುತ್ತಿದ್ದಾರೆ. ಹಾಗೆಯೇ ಬರ-ನೆರೆಗೆ ಸರ್ಕಾರ ನೀಡುವ ಪರಿಹಾರ ವಾಸ್ತವವಾಗಿ ರೈತರಿಗಾಗುವ ನಷ್ಟಕ್ಕಿಂತ ಬಹಳ ಕಡಿಮೆ ಇರುತ್ತದೆ. ಅದೇ ರೀತಿ, ಬೆಂಬಲ ಬೆಲೆಯೂ ಬಹಳ ಕಡಿಮೆ. ಅವೆರಡನ್ನೂ ರೈತರ ನಷ್ಟಕ್ಕೆ ಸರಿದೂಗುವಂತೆ ನಿಗದಿಪಡಿಸುವ ಹೊಸ ವ್ಯವಸ್ಥೆಯೊಂದನ್ನು ಕೃಷಿ ಕ್ಷೇತ್ರ ಎದುರುನೋಡುತ್ತಿದೆ. ಕೃಷಿಗೆ ಆಗುವ ವೆಚ್ಚ ಮತ್ತು ಬೆಳೆಗೆ ಸಿಗುವ ಬೆಲೆಯ ನಡುವಿನ ಅಂತರ ಕಡಿಮೆ ಮಾಡುವುದನ್ನೂ ನಿರೀಕ್ಷಿಸಲಾಗುತ್ತಿದೆ.

ರೈಲ್ವೆ:
ಈ ಬಾರಿ, ಮೊದಲ ಸಲ ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನಗೊಳಿಸಲಾಗಿದೆ. ಹಾಗಾಗಿ ಈ ಬಜೆಟ್‌'ನಲ್ಲೇ ರೈಲ್ವೆ ಇಲಾಖೆಗೆ ಅಗತ್ಯವಿರುವ ಎಲ್ಲ ಹಣಕಾಸು ಕೊಡುಗೆ ಹಾಗೂ ಇತರ ಯೋಜನೆಗಳನ್ನು ಅರುಣ್‌ ಜೇಟ್ಲಿ ಪ್ರಕಟಿಸಬೇಕಾಗುತ್ತದೆ. ಅವರು ಕೇವಲ ರೈಲ್ವೆ ಇಲಾಖೆಗೆ ಇಂತಿಷ್ಟುಅನುದಾನ ನೀಡಲಾಗುವುದು ಎಂದು ಹಣದ ವಿಷಯವನ್ನು ಮಾತ್ರ ಬಜೆಟ್‌ನಲ್ಲಿ ಹೇಳುತ್ತಾರೋ ಅಥವಾ ರೈಲ್ವೆಯ ಅಭಿವೃದ್ಧಿಗೆ ಅಗತ್ಯವಿರುವ ಬೇರೆ ಬೇರೆ ಯೋಜನೆಗಳನ್ನು ನಿರ್ದಿಷ್ಟವಾಗಿ ಪ್ರಕಟಿಸುತ್ತಾರೋ ಎಂಬುದು ಸ್ಪಷ್ಟವಿಲ್ಲ. ವಿಶೇಷವಾಗಿ ಈ ಬಾರಿ ರೈಲ್ವೆ ಟಿಕೆಟ್‌ಗಳ ಮೇಲೆ ಯಾವುದೇ ರೂಪದಲ್ಲೂ ಹೊಸ ತೆರಿಗೆ ಬೀಳಬಾರದು ಮತ್ತು ಹಳೆಯ ತೆರಿಗೆಗಳು ಹೆಚ್ಚಬಾರದು ಎಂದು ರೈಲ್ವೆ ಇಲಾಖೆ ನಿರೀಕ್ಷಿಸುತ್ತಿದೆ. ಅದರ ಜೊತೆಗೆ, ಇತ್ತೀಚಿನ ತಿಂಗಳಲ್ಲಿ ರೈಲ್ವೆ ಅಪಘಾತಗಳು ಹೆಚ್ಚುತ್ತಿವೆ. ಇದು ರೈಲ್ವೆ ಇಲಾಖೆಗೆ ಕೆಟ್ಟಹೆಸರು ತಂದುಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ವ್ಯವಸ್ಥೆಯ ಆಧುನೀಕರಣಕ್ಕೆ ಹೆಚ್ಚು ಒತ್ತು ನೀಡುವುದನ್ನು ಬಜೆಟ್‌ನಿಂದ ರೈಲ್ವೆ ಇಲಾಖೆ ನಿರೀಕ್ಷಿಸುತ್ತಿದೆ.

ರಿಯಲ್ ಎಸ್ಟೇಟ್:
ನೋಟು ಅಮಾನ್ಯದಿಂದ ಅತಿದೊಡ್ಡ ನಷ್ಟಅನುಭವಿಸಿದ್ದು ರಿಯಲ್‌ ಎಸ್ಟೇಟ್‌ ಕ್ಷೇತ್ರ. ರಿಯಲ್‌ ಎಸ್ಟೇಟ್‌ ನಿಯಂತ್ರಣಕ್ಕೆ ಕಾಯ್ದೆ ತಂದಿದ್ದರಿಂದಲೂ ಈ ಕ್ಷೇತ್ರಕ್ಕೆ ದೊಡ್ಡ ಹಾನಿಯಾಗಿದೆ. ಕಪ್ಪುಹಣ ಹಾಗೂ ಬೇನಾಮಿ ಆಸ್ತಿ ಖರೀದಿಸುವುದಕ್ಕೆ ಕಡಿವಾಣ ಬಿದ್ದಿರುವುದರಿಂದ ಕಟ್ಟಡ ನಿರ್ಮಾಣ ಕ್ಷೇತ್ರ ನೆಲ ಕಚ್ಚಿದೆ. ಆಸ್ತಿಗಳನ್ನು ಖರೀದಿಸಲು ಮುಂದಾಗುವವರಿಗೆ ನಗದು ಸಮಸ್ಯೆ. ಹಾಗಾಗಿ, ಆದಾಯ ತೆರಿಗೆ ದರ ಸಡಿಲ, ವೇತನದಾರರಿಗೆ ಎಚ್‌ಆರ್‌ಎ ಕಡಿತ ಮಿತಿ ಏರಿಕೆ ಮೊದಲಾದ ಕ್ರಮಗಳನ್ನು ಈ ಕ್ಷೇತ್ರ ನಿರೀಕ್ಷಿಸುತ್ತಿದೆ. ಜೊತೆಗೆ, ಗೃಹಸಾಲದ ಬಡ್ಡಿ ದರವನ್ನು ಇನ್ನಷ್ಟುಇಳಿಸುವುದು ಅಥವಾ ಸರ್ಕಾರದಿಂದ ವಸತಿ ಕ್ಷೇತ್ರಕ್ಕೆ ಉತ್ತೇಜನ ನೀಡುವಂಥ ಕ್ರಮಗಳನ್ನು ಜಾರಿಗೊಳಿಸುವುದನ್ನು ಎದುರು ನೋಡಲಾಗುತ್ತಿದೆ. ಗೃಹಸಾಲಕ್ಕೆ ತೆರಿಗೆ ವಿನಾಯ್ತಿ ಮಿತಿ ಏರಿಸುವುದು, ಸರ್ವರಿಗೂ 2022ರೊಳಗೆ ವಸತಿ ಕಲ್ಪಿಸುವ ಯೋಜನೆಗೆ ಶೇ.10ರಷ್ಟುಹೆಚ್ಚು ಹಣ ನೀಡುವುದು, ರಿಯಲ್‌ ಎಸ್ಟೇಟ್‌ ಇನ್‌ವೆಸ್ಟ್‌'ಮೆಂಟ್‌ ಟ್ರಸ್ಟ್‌ನ ಬಳಿ ಇರುವ ಹಣಕ್ಕೆ ಕ್ಯಾಪಿಟಲ್‌ ಗೇನ್ಸ್‌ ತೆರಿಗೆಯ ಬಗ್ಗೆ ಸ್ಪಷ್ಟನೀತಿ ಪ್ರಕಟಿಸುವುದನ್ನು ರಿಯಲ್‌ ಎಸ್ಟೇಟ್‌ ಕಂಪನಿಗಳು ನಿರೀಕ್ಷಿಸುತ್ತಿವೆ.

ಬ್ಯಾಂಕಿಂಗ್/ಹಣಕಾಸು:
ನೋಟು ರದ್ದತಿ ಹಿನ್ನೆಲೆಯಲ್ಲಿ ನಗದುರಹಿತ ವ್ಯವಹಾರಕ್ಕೆ ಬಹಳಷ್ಟುಉತ್ತೇಜಕಗಳನ್ನು ನಿರೀಕ್ಷಿಸಲಾಗಿದೆ. ಹಾಗಾಗಿ ಕಾರ್ಡುಗಳು ಮತ್ತು ಡಿಜಿಟಲ್‌ ಮೂಲದಲ್ಲಿ ವ್ಯವಹಾರ ಮಾಡುವಾಗ ತೆರಿಗೆ ವಿನಾಯಿತಿಗಳನ್ನು ಘೋಷಿಸುವುದನ್ನು ಜನಸಾಮಾನ್ಯರು, ಹಣಕಾಸು ಸೇವೆ ಪೂರೈಕೆದಾರ ಕಂಪನಿಗಳು ಹಾಗೂ ಬ್ಯಾಂಕುಗಳು ಎದುರುನೋಡುತ್ತಿವೆ. ಬ್ಯಾಂಕಿನಿಂದ ನಿಗದಿತ ಮೊತ್ತವನ್ನು ಮೀರಿ ಹಣ ಪಡೆದುಕೊಂಡಾಗ ತೆರಿಗೆ ವಿಧಿಸುವಂಥ ಕ್ರಮಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದು ಎಂಬುದು ಈ ಕ್ಷೇತ್ರದ ಆಗ್ರಹ. ಸುಸ್ತಿಸಾಲದಾರರಿಂದ ಸದ್ಯ ಬ್ಯಾಂಕಿಂಗ್‌ ಕ್ಷೇತ್ರ ದೊಡ್ಡ ಆಪತ್ತಿಗೆ ಸಿಲುಕಿದೆ. ಹಾಗೆಯೇ, ನೋಟು ಅಮಾನ್ಯದ ನಂತರ ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ಠೇವಣಿ ಹರಿದುಬರುತ್ತಿದ್ದರೂ ಸಾಲ ಪಡೆಯುವವರು ಇಲ್ಲವಾಗಿದೆ. ಹಾಗಾಗಿ ಬ್ಯಾಂಕುಗಳಿಗೆ ನಷ್ಟವಾಗುತ್ತಿದೆ. ಇದನ್ನೆಲ್ಲ ಸರಿಪಡಿಸಲು ಸರ್ಕಾರ ಏನಾದರೂ ಮಾಡಲೇಬೇಕು ಎಂದು ಬ್ಯಾಂಕಿಂಗ್‌ ಕ್ಷೇತ್ರ ನಿರೀಕ್ಷಿಸುತ್ತಿದೆ.

(epaper.kannadaprabha.in)

Follow Us:
Download App:
  • android
  • ios