Asianet Suvarna News Asianet Suvarna News

ಲಿಂಗಾಯತ ಆಯಾಮದಲ್ಲೂ ಗೌರಿ ಹತ್ಯೆ ತನಿಖೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಗೆ ಮತ್ತೊಂದು ತಿರುವು ಸಿಕ್ಕಿದ್ದು, ಈಗ ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿರುವ ‘ಲಿಂಗಾಯತ ಸ್ವತಂತ್ರ ಧರ್ಮ’ದ ಆಯಾಮದಲ್ಲೂ ತನಿಖೆ ನಡೆದಿದೆ ಎಂಬ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.

Gauri Lankesh Murder SIT looking into Separate Lingayat Religion Angle

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಗೆ ಮತ್ತೊಂದು ತಿರುವು ಸಿಕ್ಕಿದ್ದು, ಈಗ ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿರುವ ‘ಲಿಂಗಾಯತ ಸ್ವತಂತ್ರ ಧರ್ಮ’ದ ಆಯಾಮದಲ್ಲೂ ತನಿಖೆ ನಡೆದಿದೆ ಎಂಬ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.

ಈ ಅನುಮಾನಕ್ಕೆ ಕಾರಣವಾಗಿರುವುದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಹಗರಣ ಕುರಿತು ವರದಿ ಮಾಡಿದ್ದ ‘ದ ವೈರ್’ ಆಂಗ್ಲ ವೆಬ್‌ಪತ್ರಿಕೆಗೆ ಗೌರಿ ಅವರು ಬರೆದಿದ್ದ ಲೇಖನ. ಇದರಲ್ಲಿ ಲಿಂಗಾಯತ ಧರ್ಮದ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ಅವರ ಮಾಹಿತಿ ಆಧರಿಸಿ ವಿಸ್ತೃತವಾಗಿ ಗೌರಿ ಲೇಖನ ಬರೆದಿದ್ದರು.

ಈ ಲೇಖನ ವಿಷಯ ತಿಳಿದ ಎಸ್‌ಐಟಿ ಅಧಿಕಾರಿಗಳು, ಲಿಂಗಾಯತ ಧರ್ಮದ ಹೋರಾಟದ ಪರ ಮತ್ತು ವಿರೋಧಿ ಗುಂಪುಗಳ ಬಗ್ಗೆ ಸಹ ವಿವರ ಕಲೆ ಹಾಕುತ್ತಿದೆ. ಈಗಾಗಲೇ ಇದೇ ವಿಷಯವಾಗಿ ಬೆನ್ನಹತ್ತಿ ಮಹಾರಾಷ್ಟ್ರದ ಹಾಗೂ ಉತ್ತರ ಕರ್ನಾಟಕದ ಕೆಲವು ಕಡೆ ತನಿಖಾ ತಂಡವು ಶೋಧ ಸಹ ನಡೆಸಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಗೌರಿ ಲಂಕೇಶ್ ಹಾಗೂ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೆ ಪ್ರಗತಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಗೌರಿ ಅವರು, ಯಾವತ್ತಿಗೂ ತಮ್ಮ ಸಮುದಾಯದ ಜತೆ ಗುರುತಿಸಿಕೊಂಡಿದ್ದು ಇಲ್ಲ. ಇದಕ್ಕೆ ಭಿನ್ನವಾಗಿದ್ದ ಹಿರಿಯ ಸಂಶೋಧಕ ಡಾ.ಎಂ. ಎಂ.ಕಲಬುರ್ಗಿ ಅವರು, ಶರಣ ಪರಂಪರೆ ಹಿನ್ನೆಲೆಯ ಉತ್ತರ ಕರ್ನಾಟಕದ ಕೆಲವು ಪ್ರಮುಖ ಮಠಗಳ ಜತೆ ಅವರು ನಿಕಟತೆ ಹೊಂದಿದ್ದರು. ಈ ಇಬ್ಬರ ನಡುವಿನ ಸಾಮ್ಯತೆ ಅಂದರೆ ‘ವೈಚಾರಿಕ ನಿಲುವು’ಗಳಾಗಿವೆ. ‘ಇವರಿಬ್ಬರೂ ಬಲಪಂಥೀಯ ಸಿದ್ಧಾಂತವನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು. ಈ ವೈಚಾರಿಕ ನಿಲುವು ವಿಷಯವಾಗಿ ಆ ಸಮುದಾಯದ ಕೆಲವರ ಜತೆ ಅವರು ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮದ ನಿಟ್ಟಿನಲ್ಲಿ ಸಹ ತನಿಖೆ ನಡೆದಿದೆ. ಗೌರಿ ಅವರ ಹತ್ಯೆಗೀಡಾಗುವ

ಮೂರು ದಿನಗಳ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿರುವ ರಾಜ್ಯದ ಪ್ರಭಾವಿ ಸಚಿವರನ್ನು ಕೆಲವು ಚಿಂತಕರ ಜತೆ ಗೌರಿ ಭೇಟಿಯಾಗಿದ್ದರು. ಹೋರಾಟದಲ್ಲಿ ಪ್ರಗತಿಪರ ಚಿಂತಕರನ್ನು ಕರೆತರುವ ಬಗ್ಗೆ ಆ ನಾಯಕರ ಜತೆ ಗೌರಿ ಅವರು ಸುದೀರ್ಘವಾಗಿ ಚರ್ಚಿಸಿದ್ದರು. ಈ ಭೇಟೆ ವೇಳೆ ಅವರ ಜತೆ ರಂಗಕರ್ಮಿಯೊಬ್ಬರು ಕೂಡ ಇದ್ದರು ಎಂಬ ಮಾಹಿತಿ ಸಹ ಇದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಲೇಖನ ಪ್ರಕಟಗೊಂಡ ತಿಂಗಳಲ್ಲೇ ಕೊಲೆ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕುರಿತು ಆಗಸ್ಟ್ 8 ರಂದು ‘ದ ವೈರ್’ ವೆಬ್‌ಪತ್ರಿಕೆಗೆ ಗೌರಿ ಅವರು ಲೇಖನ ಬರೆದಿದ್ದರು. ಇದಾದ ನಂತರ ಸೆ.5 ರಂದು ಅವರ ಹತ್ಯೆಯಾಗಿದೆ. ಅವರ ಸ್ಮರಣಾರ್ಥವಾಗಿ ಮತ್ತೆ ಅವರ ಲೇಖನ ಮತ್ತೊಮ್ಮೆ ಪ್ರಕಟವಾಗಿತ್ತು. ಹೀಗಾಗಿ ವೈಚಾರಿಕ ನಿಟ್ಟಿನ ತನಿಖೆಯಲ್ಲಿ ಲಿಂಗಾಯತ ಧರ್ಮ ವಿವಾದದ ಆಯಾಮದಲ್ಲೂ ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಬರೆದಿದ್ದ ಲೇಖನಗಳ ಬಗ್ಗೆ ತನಿಖೆ ನಡೆದಿದೆ ಎಂದು ಮೂಲಗಳು ಹೇಳಿವೆ.

ವಾಸ್ತವ್ಯ ಕೊಟ್ಟವನ ಮೇಲೆ ನಿಗಾ:

ಈ ನಡುವೆ ಗೌರಿ ಹಂತಕರಿಗೆ ಬೆಂಗಳೂರು ನಗರದಲ್ಲಿ ವಾಸ್ತವ್ಯ ಹೂಡಲು ನೆರವು ಕೊಟ್ಟಿದ್ದ ವ್ಯಕ್ತಿಯೊಬ್ಬನ ಕುರಿತು ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಗೌರಿ ಅವರ ನಿವಾಸದ ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತರ ಚಲನವಲನ ಪತ್ತೆಯಾದರೆ, ಮತ್ತೆ ಎರಡ್ಮೂರು ಕ್ಯಾಮೆರಾದಲ್ಲಿ ಅವರ ಓಡಾಟದ ಸುಳಿವು ಸಿಗುವುದಿಲ್ಲ. ಆದರೆ ಕೆಲ ಹೊತ್ತಿನ ಬಳಿಕ ಆ ಪ್ರದೇಶದ ಮತ್ತೊಂದು ಕಡೆ ಅವರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಆ ಪ್ರದೇಶದ ವ್ಯಕ್ತಿಯೊಬ್ಬನ ನೆರವು ಶಂಕಿತರಿಗೆ ಲಭಿಸಿರಬಹುದು ಎಂದು ಎಸ್‌ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ

Latest Videos
Follow Us:
Download App:
  • android
  • ios