ಕಸದಲ್ಲೂ ಮಾಫಿಯಾ : ಕೋಟಿಗಟ್ಟಲೇ ಸಾರ್ವಜನಿಕ ಹಣ ವ್ಯಯ

Garbage Mafia In BBMP
Highlights

ಬಿಬಿಎಂಪಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಗುತ್ತಿಗೆದಾರರನ್ನು ಒಳಗೊಂಡ ಈ ಮಾಫಿಯಾ ಹೊಸ ವ್ಯವಸ್ಥೆ ಜಾರಿಗೆ ಬರಲು ಅವಕಾಶವೇ ನೀಡುತ್ತಿಲ್ಲ. ಇಲಾಖಾ ನಿರ್ವಹಣೆ ಹೆಸರಿನಲ್ಲಿ ಹಳೆ ಗುತ್ತಿಗೆದಾರರಿಂದಲೇ ಕಸ ವಿಲೇವಾರಿ ನಡೆಸುತ್ತಿದೆ. 

ಬೆಂಗಳೂರು :  ಅದು ಬಿಬಿಎಂಪಿಗೆ ಆಡಳಿತಾಧಿಕಾರಿ ಇದ್ದ ಕಾಲ. ಬಿಬಿಎಂಪಿಯು ಕಸ ಮಾಫಿಯಾ ಹತೋಟಿಗೆ ತೆಗೆದುಕೊಳ್ಳಲು ಗುತ್ತಿಗೆದಾರರಿಗೆ ಹಲವು ಮಾನದಂಡ ಹಾಗೂ ಷರತ್ತುಗಳನ್ನು ವಿಧಿಸಿತು. ಈ ಷರತ್ತು, ಮಾನದಂಡ ಪೂರೈಸಬೇಕಾದರೆ ನೀಡುವ ಹಣ ದುಪ್ಪಟ್ಟು ಆಗಬೇಕು ಎಂದು ಗುತ್ತಿಗೆದಾರರು ಪಟ್ಟು ಹಿಡಿದರು. ಅದಕ್ಕೂ ಒಪ್ಪಿದ ಬಿಬಿಎಂಪಿ ಕಸ ನಿರ್ವಹಣೆಗೆ ನೀಡುತ್ತಿದ್ದ ಹಣವನ್ನು ದುಪ್ಪಟ್ಟು ಮಾಡಿತು.

ಇದಾಗಿ ಮೂರು ವರ್ಷ ಸಂದಿದೆ. ಬಿಬಿಎಂಪಿ ಒಪ್ಪಿಕೊಂಡಂತೆ ಕಸ ನಿರ್ವಹಣೆಗೆ ನೀಡುತ್ತಿದ್ದ ಹಣ ಈಗ ದುಪ್ಪಟ್ಟು ಪಾಲನೆಯಾಗುತ್ತಿದೆ. ಆದರೆ, ಗುತ್ತಿಗೆದಾರರು ಮಾತ್ರ ಆಡಳಿತಾಧಿಕಾರಿಗಳು ಸೂಚಿಸಿದ ಯಾವೊಂದು ಮಾನದಂಡ ಹಾಗೂ ಷರತ್ತುಗಳನ್ನು ಪಾಲಿಸುತ್ತಿಲ್ಲ. ಏಕೆಂದರೆ, ಈ ಮಾನದಂಡ ಪಾಲನೆಗೆ ಹೊಸ ಟೆಂಡರ್ ಯಶಸ್ವಿಯಾಗಲು ಕಸ ಮಾಫಿಯಾ ಬಿಬಿಎಂಪಿಗೆ ಬಿಡಲೇ ಇಲ್ಲ.

ಬಿಬಿಎಂಪಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಗುತ್ತಿಗೆದಾರರನ್ನು ಒಳಗೊಂಡ ಈ ಮಾಫಿಯಾ ಹೊಸ ವ್ಯವಸ್ಥೆ ಜಾರಿಗೆ ಬರಲು ಅವಕಾಶವೇ ನೀಡುತ್ತಿಲ್ಲ. ಇಲಾಖಾ ನಿರ್ವಹಣೆ ಹೆಸರಿನಲ್ಲಿ ಹಳೆ ಗುತ್ತಿಗೆದಾರರಿಂದಲೇ ಕಸ ವಿಲೇವಾರಿ ನಡೆಸುತ್ತಿದೆ. ಈ ಗುತ್ತಿಗೆದಾರರಿಗೆ  ರಿಷ್ಕೃತ ಗುತ್ತಿಗೆ ಹಣ ನೀಡಲಾಗುತ್ತಿದೆ. ಮಾನದಂಡ ಪಾಲನೆಯಾಗುವಂತೆ ಮಾಡುವ ಯಾವ ಗಟ್ಟಿ ನಿರ್ಧಾರವನ್ನು ಬಿಬಿಎಂಪಿ ಕೈಗೊಳ್ಳುತ್ತಿಲ್ಲ.
2013 ರಲ್ಲಿ ಉಂಟಾಗಿದ್ದ ತ್ಯಾಜ್ಯ ಸಮಸ್ಯೆಯಿಂದ ವಿಶ್ವಮಟ್ಟದಲ್ಲಿ ತ್ಯಾಜ್ಯ ನಗರಿಯಾಗಿ ಬೆಂಗಳೂರು ತಲೆ ತಗ್ಗಿಸಿತ್ತು. ಇದಕ್ಕೆ ಕಾರಣವಾಗಿದ್ದ ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ಗುತ್ತಿಗೆದಾರರ ಮಾಫಿಯಾ ಮಟ್ಟ ಹಾಕಲು ನಡೆಸಿದ ಪ್ರಯತ್ನವೂ ವಿಫಲವಾಗಿದ್ದವು. 

ಈ ಹಿನ್ನೆಲೆಯಲ್ಲಿ 2015-16 ರಲ್ಲಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಹಾಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ವೈಜ್ಞಾನಿಕ ಕಸ ವಿಲೇವಾರಿಗೆ ಪ್ರತ್ಯೇಕ ಮಾನದಂಡಗಳನ್ನು ರೂಪಿಸಿದ್ದರು. ಕಸ ಸಮಸ್ಯೆ ಹಾಗೂ ಗುತ್ತಿಗೆದಾರರ ವಂಚನೆಗೆ ಬ್ರೇಕ್ ಹಾಕಲು ಗುತ್ತಿಗೆದಾರರು ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಬಿಬಿಎಂಪಿ ವಿಧಿಸಿರುವ ಎಲ್ಲಾ ವೈಜ್ಞಾನಿಕ ಮಾನದಂಡ ಪಾಲಿಸಿದರೆ ಕಸ ವಿಲೇವಾರಿ ಗುತ್ತಿಗೆ ದರವನ್ನು ವಾರ್ಷಿಕ370-400 ಕೋಟಿ ರು.ಗಳಿಂದ 750 ಕೋಟಿ ರು.ಗಳಿಗೆ ಹೆಚ್ಚಳ ಮಾಡುವುದಾಗಿ ಆದೇಶಿಸಿದ್ದರು.  ನಾಲ್ಕು ಬಾರಿ ಹೊಸ ಗುತ್ತಿಗೆ ಆಹ್ವಾನಿಸಿದರೂ ಯಾರೊಬ್ಬರೂ ಗುತ್ತಿಗೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಅವಧಿ ಮುಗಿದರೂ ಹಳೆಯ ಗುತ್ತಿಗೆದಾರರೇ ಗುತ್ತಿಗೆ ನಿರ್ವಹಣೆಯಲ್ಲಿ ಮುಂದುವರೆದಿದ್ದು, ಯಾವುದೇ ಹೊಸ ಷರತ್ತುಗಳನ್ನು ಪಾಲಿಸದೆ ದುಪ್ಪಟ್ಟು ಗುತ್ತಿಗೆ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿರುವ ಪ್ರಭಾವಿ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳೂ ಸಹ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದುತಿಳಿದುಬಂದಿದೆ. 

ವೈಜ್ಞಾನಿಕ ಮಾನದಂಡಗಳೇನು?: ಬಿಬಿಎಂಪಿಯಲ್ಲಿ ಬೇರು ಬಿಟ್ಟಿರುವ ಗುತ್ತಿಗೆ ಮಾಫಿಯಾ ತನ್ನಲ್ಲಿರುವ  ಕಾಂಪಾಕ್ಟರ್, ಆಟೋ ಟಿಪ್ಪರ್, ಗುತ್ತಿಗೆ ಪೌರಕಾರ್ಮಿಕರ ಬಗ್ಗೆ ಸುಳ್ಳು ಲೆಕ್ಕ ನೀಡಿ ಹಣ ಲೂಟಿ ಮಾಡಿತ್ತು. ಇದಕ್ಕೆ ಬ್ರೇಕ್ ಹಾಕಲು ಟಿ.ಎಂ. ವಿಜಯಭಾಸ್ಕರ್, ಹೊಸ ಗುತ್ತಿಗೆ ಅನ್ವಯ ಪ್ರತಿಯೊಬ್ಬ ಗುತ್ತಿಗೆದಾರರು ಕಾಂಪಾಕ್ಟರ್ ಹಾಗೂ ಆಟೋ ಟಿಪ್ಪರ್ ಗಳಿಗೆ ಜಿಪಿಎಸ್ ಅಳವಡಿಕೆ ಮಾಡಿ ಬಿಬಿಎಂಪಿ ಆ್ಯಪ್‌ಗೆ ಲಿಂಕ್ ಮಾಡಬೇಕು. ಜತೆಗೆ ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದ್ದರು.

ಪ್ರತಿಯೊಂದು ಮನೆಯಿಂದ ಹಸಿ-ಒಣ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಪ್ರತ್ಯೇಕ ಕಾಂಪಾಕ್ಟರ್ ಗಳ ಮೂಲಕ ಕಸ ವಿಲೇವಾರಿ ಘಟಕಗಳಿಗೆ ಸಾಗಾಣೆ ಮಾಡಬೇಕು. ಪ್ರತಿ ವಾಹನವೂ ಜಿಪಿಎಸ್ ಟ್ರ್ಯಾಕಿಂಗ್ ಆದರೆ ಮಾತ್ರ ಬಿಲ್ ಮಾಡಲಾಗುವುದು. ಜತೆಗೆ, ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರಿಗೆ ಈವೆಗೂ ರಜೆ ನೀಡುತ್ತಿಲ್ಲ. ವಾರಕ್ಕೊಮ್ಮೆ ಅರ್ಧ ದಿನ ರಜೆ ನೀಡುತ್ತಿದ್ದು ಅದು ರಜೆ ಎಂದು ಪರಿಗಣನೆ ಯಾಗುವುದಿಲ್ಲ. ಇವರಿಗೆ ರಜೆ ನೀಡುವ ಸಲುವಾಗಿ ಶೇ.16ರಷ್ಟು ಹೆಚ್ಚುವರಿ ಗುತ್ತಿಗೆ ಪೌರಕಾರ್ಮಿರನ್ನು ನೇಮಕ ಮಾಡಬೇಕು. ಜತೆಗೆ ಕಸ ಗುಡಿಸುವ ರಸ್ತೆಗಳ ಉದ್ದ ಕಡಿಮೆ ಮಾಡಲಾಗುವುದು. ಪ್ರತಿ ಸಾರ್ವಜನಿಕ ಸ್ಥಳಗಳಲ್ಲೂ ಗುತ್ತಿಗೆದಾರರ ವೆಚ್ಚದಿಂದಲೇ ಕಸದ ಡಬ್ಬಿ ಅಳವಡಿಕೆ ಮಾಡಬೇಕು. ಪ್ರತಿ ನಿತ್ಯ ಕಸ ಸಾಗಿಸುವ 200 ಚಾಲಕರಿಗೆ ನಿತ್ಯ 200 ರು. ಊಟದ ಭತ್ಯೆ ನೀಡಬೇಕು ಎಂದು ಹೇಳಿದ್ದರು. 

ಗುತ್ತಿಗೆ ಮಾಫಿಯಾ ಮೇಲುಗೈ: ಬಿಬಿಎಂಪಿ ಆಯುಕ್ತ ಮಂಜುನಾಥ್‌ಪ್ರಸಾದ್, 2017 ರಲ್ಲಿ 151 ಪ್ಯಾಕೇಜ್ ಗಳಿಗೆ ಟೆಂಡರ್ ಆಹ್ವಾನಿಸಿದರೂ  14 ಬಿಡ್ ಮಾತ್ರ ಬಂದಿತ್ತು. ಹೀಗಾಗಿ ಗುತ್ತಿಗೆದಾರರ ಮಾಫಿಯಾವನ್ನು ಸದೆಬಡಿಯಲು ಗುತ್ತಿಗೆ ಪೌರಕಾರ್ಮಿಕರು ಹಾಗೂ ಸಾಗಾಣೆ ವಾಹನ, ಸಲಕರಣೆಯನ್ನು ಪ್ರತ್ಯೇಕ ಟೆಂಡರ್ ನೀಡಲು ಮುಂದಾದರು. ಈ ವೇಳೆಯೂ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದ ಹಿನ್ನೆಲೆ
ಯಲ್ಲಿ ೧೮ ಸಾವಿರ ಗುತ್ತಿಗೆ ಪೌರಕಾರ್ಮಿಕರಿಗೂ ಬಿಬಿಎಂಪಿ ವತಿಯಿಂದಲೇ ನೇರ ವೇತನ ಪಾವತಿಗೆ ನಿರ್ಧರಿಸಲಾಯಿತು. ಇದೀಗ ಗುತ್ತಿಗೆದಾರರು ಬಿಬಿಎಂಪಿ ಇಲಾಖಾ ನಿರ್ವಹಣೆಯಡಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಆದರೂ 2017 ರ ಮೇನಲ್ಲಿ ಸಿದ್ಧಪಡಿಸಿರುವ ಮೈಕ್ರೋ ಪ್ಲಾನ್‌ನ ಮಾನದಂಡಗಳನ್ನು ಪಾಲಿಸುತ್ತಿಲ್ಲ. 

ನಿಯಮ ಉಲ್ಲಂಘನೆ: ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ರತ್ಯೇಕ ವಾಹನಗಳಲ್ಲಿ ಸಾಗಿಸುವ ಕಾರ್ಯ ಶೇ.70 ರಷ್ಟು ಅನುಷ್ಠಾನವಾಗಿಲ್ಲ. ತ್ಯಾಜ್ಯ ವಿಂಗಡಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಘನ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಹಸಿ ತ್ಯಾಜ್ಯ ಪೂರೈಸುತ್ತಿಲ್ಲ. ಮನೆ-ಮನೆಗಳಿಂದ ತ್ಯಾಜ್ಯ ಸಂಗ್ರಹಿ ಸಲು 4 ಸಾವಿರ ಆಟೋ ಟಿಪ್ಪರ್ ನಿಯೋಜಿಸಬೇಕಾಗಿತ್ತು. ಆದರೆ, ಸರಕು ಸಾಗಾಣೆ ಆಟೋ ನಿಯೋಜಿಸಿ ತ್ಯಾಜ್ಯವು ನೇರವಾಗಿ ಕಾಂಪಾಕ್ಟರ್ ಕಳುಹಿಸದೆ ಬ್ಲಾಕ್ ಸ್ಪಾಟ್ ಹೆಚ್ಚು ಮಾಡಲಾಗುತ್ತಿದೆ.

ಆಟೋಗಳ ಚಲನವಲನ ಗಮನಿಸಲು ಜಿಪಿಎಸ್ ಆ್ಯಪ್ ಮೂಲಕ ನೋಂದಣಿ ಮಾಡಲು ವಾಹನಗಳ ವಿವರ ನೀಡಬೇಕಿತ್ತು. ಆದರೆ, ಶೇ.50 ರಷ್ಟು ವಾಹನಗಳ  ಮಾಹಿತಿಯನ್ನೇ ನೀಡಿಲ್ಲ. ಬಿಬಿಎಂಪಿಯಲ್ಲಿ560 ಕಾಂಪಾ ಕ್ಟರ್ ವಾಹನ ಕಾರ್ಯ ನಿರ್ವಹಿಸುತ್ತಿದೆ. ನಿತ್ಯ ಅವುಗಳು ಕಸ ಸಂಸ್ಕರಣಾ ಘಟಕ ಹಾಗೂ ಕ್ವಾರಿಗಳಿಗೆ ಕಸ ವಿಲೇ ವಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಆದರೆ, ನಿತ್ಯ 400 ಕಾಂಪಾಕ್ಟರ್ ಮಾತ್ರ ಕೆಲಸ ಮಾಡುತ್ತಿದೆ. 

loader