ಗಾಂಧಿ, ಕಸ್ತೂರಬಾ ಗಾಂಧಿ
ಕಾಲದ ಅಗತ್ಯದೊಂದಿಗೆ ಗಾಂಧೀ, ಕಸ್ತೂರಬಾರವರು ವೈಯಕ್ತಿಕವಾಗಿ ಕಳೆದುಕೊಂಡು ಚಾರಿತ್ರಿಕವಾಗಿ ಪಡೆದುಕೊಂಡಿರುವ ಅಂತಿಮ ಸತ್ಯಗಳು ನಮಗೆ ಕಂಡರೆ ಸಹಿಷ್ಣುತೆಯೆಂಬುದು ಪದವಾಗಿ ಉಳಿಯದೆ ಪದಾರ್ಥವಾಗಿ ನಮ್ಮ ವಿವೇಕದಲ್ಲಿ ಜೀರ್ಣಗೊಳ್ಳಬಲ್ಲದು. ಗಾಂಧೀ ಕೇವಲ ಗಾಂಧೀಯಲ್ಲ. ಗಾಂಧಿ ಪರಿಪೂರ್ಣಗೊಳ್ಳುವುದೇ ಕಸ್ತೂರಬಾ ಗಾಂಧಿಯೊಂದಿಗೆ ಎಂಬುದನ್ನು ಕಾಲ ಒಪ್ಪಬೇಕು.
- ಡಾ.ಮಲ್ಲಿಕಾ ಎಸ್. ಘಂಟಿ
ಕುಲಪತಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ನನ್ನೊಳಗೆ ಗಾಂಧೀಜಿಯ ಹಲವು ರೂಪಗಳು, ಅಭಿಪ್ರಾಯಗಳು ಇವೆ. ಈ ರೂಪಗಳು ಗಾಂಧೀಜಿಯ ಕಾರಣಕ್ಕೆ ಹುಟ್ಟಿದವುಗಳಲ್ಲ. ಗಾಂಧೀಜಿ ಎಂಬ ಶಕ್ತಿಯನ್ನು ಗ್ರಹಿಸುವಲ್ಲಿಯ ನನ್ನ ಕಾರಣಗಳಿಗಾಗಿ ಗಾಂಧಿ ಹಲವು ಅರ್ಥಛಾಯೆಗಳಲ್ಲಿ ನನ್ನೊಂದಿಗಿರುವರು. ಶಾಲೆಯಲ್ಲಿ ಆಗಸ್ಟ್ ಹದಿನೈದು, ಗಾಂಧಿ ಜಯಂತಿಗಳಂದು ಊರಲ್ಲೆಲ್ಲ ಪ್ರಭಾತ್ ಫೇರಿಯಲ್ಲಿ, ‘ಗಾಂಧೀಜಿ ಕೀ ಜೈ’ ಎಂದು ಗುವಾಗಲೆಲ್ಲ ರೋಮಾಂಚನಗೊಂಡು, ಗುರುಗಳ ಭಾಷಣದ ಗಾಂಧಿಯನ್ನು ಕಲ್ಪಿಸಿಕೊಂಡು ಹುಟ್ಟಿದ ನನ್ನೊಳಗಿನ ಗಾಂಧಿರೂಪ ಅತ್ಯಂತ ಬೆರಗಿನದ್ದು ಮತ್ತು ಅಪ್ಪಟ ದೇಶಭಕ್ತಿಯ ಪರಿಣಾಮಾತ್ಮಕ ಫಲಶ್ರುತಿ. ಗಾಂಧಿ ಕುರಿತು ಭಾಷಣ ಕೇಳುತ್ತಾ ಕೇಳುತ್ತಾ ಉಂಟಾದ ರೋಮಾಂಚನ, ಪುಳಕ ಗಾಂಧಿಯನ್ನು ಗೋಡ್ಸೆ ಗುಂಡಿಟ್ಟು ಹತ್ಯೆ ಮಾಡಿದ ಎಂದು ಗುರುಗಳು ಭಾಷಣದ ಕೊನೆಯಲ್ಲಿ ಹೇಳುವಾಗ ಕಣ್ಣಲ್ಲಿ ನೀರು ಹರಿದು ಕಪಾಳಕ್ಕೆ ಬಂದದ್ದು ತಿಳಿಯುತ್ತಿದ್ದಿಲ್ಲ. ನಮ್ಮ ಮನೆಯ ಅಜ್ಜನನ್ನು ಕಳೆದುಕೊಂಡ ವಿಷಾದ ಸಂಕಟ ಮಡುಗಟ್ಟುವಾಗ ಹುಟ್ಟಿದ ಗಾಂಧಿ ಚಿತ್ರ ಪೋರಬಂದರಿನದ್ದಾಗಿರಲಿಲ್ಲ. ನನ್ನ ಮನೆಯ ಅಜ್ಜನದಾಗಿತ್ತು.
ಆ ಹೊತ್ತು ಗಾಂಧೀಜಿಯವರ ಸರಳತೆ, ಪ್ರಾಮಾಣಿಕತೆ, ಸೇವಾಗುಣಗಳನ್ನು ಹಳ್ಳಿ ಶಾಲೆ ಅಂತರಾಳಕ್ಕೆ ಇಳಿಸಿತ್ತು. ಅಂದು ಮೂಡಿದ ಗಾಂಧೀತಾತನ ಕನವರಿಕೆ ಬೆಳೆಯುತ್ತಲೇ ಹೋಯಿತು. ಬಾಲ್ಯದ ಗಾಂಧಿತಾತನ ಬಗ್ಗೆ ಭಕ್ತಿ ಭಾವಗಳು ಮೂಡಿದಂತೆ ಗಾಂಧಿ ನನ್ನೆದೆಯ ಗೋಡೆ ಮೇಲೆ ವಿರಾಜಿಸಲು ಪ್ರಾರಂಭಿಸಿದ. ಇದು ಜಗತ್ತಿನ ಬಗ್ಗೆ ಏನೂ ಅರಿಯದ ನನ್ನೊಳಗೆ ಮೂರ್ತ ರೂಪುತಾಳಿದ ಗಾಂಧಿ ಇಂದಿಗೂ ಅದೇ ಮುಗ್ಧತೆಯಲ್ಲಿ ಉಳಿಯಲಿಲ್ಲ.
ಓದುತ್ತ ಓದುತ್ತ, ಜಗತ್ತಿಗೆ ತೆರೆದುಕೊಂಡ ಹಾಗೆ ನನ್ನ ಬಾಲ್ಯದ ಗಾಂಧಿ ಕಾಣೆಯಾದ ಎಂದು ಎಷ್ಟೋ ಸಲ ಅನಿಸಿದ್ದುಂಟು. ಬೇರೆ ಬೇರೆ ಸೈದ್ಧಾಂತಿಕ ನಿಲುವಿನ ವ್ಯಕ್ತಿಗಳ ಒಡನಾಟದಿಂದ, ಬೌದ್ಧಿಕ ಬಲದಿಂದ ಹುಟ್ಟಿದ ಗಾಂಧೀ ರೂಪು ಬಾಲ್ಯದ ಗಾಂಧಿಯ ಜೊತೆಗೆ ಆಗಾಗ ಮುಖಾಮುಖಿಯಾದಾಗಲೂ ಬಾಲ್ಯದ ಗಾಂಧಿತಾತನನ್ನು ಜತನವಾಗಿಯೇ ಇಟ್ಟುಕೊಂಡಿರುವೆ. ಬೌದ್ಧಿಕ ಬಲವೆಂಬ ಠೇಂಕಾರದಿಂದ, ಸ್ತ್ರೀವಾದಿ ಸಿದ್ಧಾಂತದಿಂದ ಗಾಂಧಿ ರೂಪ ನನ್ನೊಳಗೆ ಕಪ್ಪು ಬಿಳುಪಾಗಿ ರೂಪುಗೊಂಡಿರುವುದು ನನ್ನ ತಪ್ಪಿನಿಂದಲ್ಲ. ಗಾಂಧಿ ತಪ್ಪಂತೂ ಇಲ್ಲವೇ ಇಲ್ಲ. ಗಾಂಧಿ ಮತ್ತು ಕಸ್ತೂರಬಾ ಗಾಂಧಿಯ ಕುರಿತ ಹಾಗೆ ಓದಿನ ಗ್ರಹಿಕೆಗಳು ಗಾಂಧಿಯನ್ನು ಎಲ್ಲೋ ಒಂದು ಕಡೆ ಪ್ರಶ್ನಿಸಲು ಒತ್ತಾಯಿಸುತ್ತಿದ್ದವು. ಹೀಗಾಗಿ ಗಾಂಧಿ ಮಹಿಳೆಯರ ಕುರಿತು ತಳೆದಿದ್ದ ನಿಲುವುಗಳು ಸನಾತನ ಮನಸ್ಸಿನವುಗಳು ಎಂದು ಪ್ರಶ್ನಿಸುವುದಕ್ಕೆ ಪ್ರಚೋದಿಸುತ್ತಿದ್ದವು.
ಇದು ಕೂಡ ಒಕ್ಕಣ್ಣಿನ ದೃಷ್ಟಿಕೋನದಿಂದ ಹುಟ್ಟಿದ ಅಭಿಪ್ರಾಯವೆಂಬುದು ನಂತರ ಮನವರಿಕೆಗೆ ಬಂದ ಸತ್ಯ. ಕುಟುಂಬ-ಸಮಾಜಗಳೆರಡು ವ್ಯಕ್ತಿಯ ಬೆಳವಣಿಗೆಯಲ್ಲಿ ಎಷ್ಟು ಮುಖ್ಯ ಪಾತ್ರವಹಿಸುತ್ತವೋ ಅಷ್ಟೇ ವ್ಯಕ್ತಿಯು ಸಮಾಜ, ಕುಟುಂಬಗಳಲ್ಲಿ ಹಂಚಿಹೋಗುವುದು ವಾಸ್ತವ. ಸಮಾಜ ಸಂಬಂಧಿ ಎಳೆತ ಬಲವಾಗಿದ್ದರೆ ಕುಟುಂಬ ಸೊರಗುತ್ತದೆ. ಕುಟುಂಬದ ಸೆಳೆತ ಬಿಗಿಯಾಗಿದ್ದರೆ ಸಾಮಾಜಿಕ ಬದುಕಿನಲ್ಲಿ ನಗಣ್ಯಗೊಳ್ಳುತ್ತೇವೆ. ಗಾಂಧೀಜಿ ಈ ಎರಡು ಎಳೆತಗಳಲ್ಲಿ ಸಿಕ್ಕು ಒದ್ದಾಡದೆ ಸಮಾಜ, ದೇಶ, ಜನ ಸ್ವಾತಂತ್ರ್ಯ ಚಳುವಳಿ, ಹೋರಾಟವೆಂಬ ಸಮುದ್ರಕ್ಕೆ ಧುಮುಕಿ ಈಜಿ ದಡ ಸೇರಿದರು. ಈಜುವ ಹೊತ್ತಿನಲ್ಲಿ ಕುಟುಂಬ ಸೊರಗಿದೆ. ಕಸ್ತೂರ ಬಾ ಎಂಬ ಸಿಂಗಡಿ ಗಾಂಧಿಯನ್ನು ಮುಳುಗದ ಹಾಗೆ ಎಚ್ಚರ ವಹಿಸಿದೆ. ಗಾಂಧೀಜಿಯವರು ಹೆಣ್ಣಿನ ಹಕ್ಕು ಬಾಧ್ಯತೆಗಳ ಬಗ್ಗೆ ಮಾತನಾಡಿದ ಮಾತುಗಳು ಏಕರೂಪದ್ದಲ್ಲ ಮತ್ತು ಈ ವಿಚಾರಗಳು ನಮ್ಮ ನಮ್ಮ ಗ್ರಹಿಕೆಗೆ ಹೊಳೆದ ಅರ್ಥ ಹೊರಡಿಸುತ್ತವೆ. ಗಂಡಸಿಗೆ ಇರುವ ಎಲ್ಲ ಹಕ್ಕುಗಳು ಹೆಣ್ಣಿಗೂ ಇರಬೇಕು ಎಂದು ಸಾರ್ವಜನಿಕವಾಗಿ ಒತ್ತಾಯಿಸುವ ವ್ಯಕ್ತಿ ಕುಟುಂಬ ನೆಲೆಯಲ್ಲಿ ಸಾಕಾರಗೊಳಿಸಲು ಸೋಲುತ್ತಾರೆ. ಅದು ಸೋಲಲ್ಲ ತಾವು ನಂಬಿದ ಸಿದ್ಧಾಂತದ ಬೆಳಕಿನಲ್ಲಿ ಗುರಿ ಮುಟ್ಟುವುದಕ್ಕೆ ಬಳಸಿದ ತಂತ್ರವಾಗಿರಬಹುದು. ಗಾಂಧಿ ದೃಷ್ಟಿಯಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯು ಮುಂದೆ ಬರಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುವ ಹೊತ್ತಿನಲ್ಲಿ ಆಕೆ ಸೀತೆ ಸಾವಿತ್ರಿಯರ ಪ್ರತಿರೂಪವಾಗಿರಬೇಕು ಎಂದು ಹೇಳುತ್ತಿದ್ದರು.
ಮಹಿಳೆಯರಿಗೆ ಸಂಬಂಧಿಸಿ ಗಾಂಧಿ ವಿಚಾರಧಾರೆ ಚೈತನ್ಯವಾದಿ ಸಿದ್ಧಾಂತದಿಂದ ಪ್ರಭಾವಿತವಾಗಿರಬಹುದು. ಅದೇ ಹೊತ್ತಿನಲ್ಲಿ ಆಧುನಿಕತೆಯನ್ನು ಒಪ್ಪದಿದ್ದರೆ ಎಲ್ಲಿ ಅನಾಗರಿಕಲೋಕಕ್ಕೆ ಹೋಗಿ ಬಿಡುತ್ತೇವೆಯೋ ಎಂಬ ಭಯವು ಕಾಡಿದಂತಿದೆ. ಹೀಗಾಗಿಯೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರೂರವರ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರು ಇಲ್ಲದ್ದನ್ನು ಗಂಭೀರವಾಗಿ ಪರಿಗಣಿಸಿ ಅದರ ಕುರಿತು
ನೆಹರೂರವರೊಂದಿಗೆ ಅಸಮಾಧಾನವನ್ನು, ಕೋಪವನ್ನು ವ್ಯಕ್ತಪಡಿಸಿ ಪತ್ರ ಬರೆಯುತ್ತಾರೆ. ಮಹಿಳೆಯರನ್ನು ಕಡೆಗಣಿಸಿ ಅದು ಹೇಗೆ ರಾಜಕೀಯ ಮಾಡುತ್ತೀರಿ ಎಂಬ ಅವರ ಮಾತು ಮಹಿಳೆಯರು ರಾಜಕೀಯ ರಂಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಕಾರಣದ್ದಾಗಿತ್ತು. ಸೀತೆ-ಸಾವಿತ್ರಿಯರ ಮಾದರಿಯನ್ನು ಸಾಂಸ್ಕೃತಿಕವಾಗಿ ಒಪ್ಪಿದ್ದ ಗಾಂಧಿ ಭಿನ್ನವಾಗಿ ಸಾಮಾಜಿಕ ನೆಲೆಯಲ್ಲಿ ಆಲೋಚಿಸುತ್ತ ಮಹಿಳೆಯ ಪಾಲ್ಗೊಳ್ಳುವಿಕೆ ಕುರಿತು ಕಾರ್ಯತತ್ಪರರಾಗಿದ್ದರು.
1936ರಲ್ಲಿ ಮುಂಬೈನಲ್ಲಿ ನಡೆದ ಮಹಿಳೆಯರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೆಣ್ಣುಮಕ್ಕಳು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ಕೊಡುತ್ತಾರೆ. ತಮ್ಮ ಮೇಲೆ ಶೋಷಣೆ ನಡೆದಾಗ ಮಹಿಳೆಯರು ಮೌನದಿಂದ ಇರಬಾರದೆಂದು, ಸುಮ್ಮನೆ ಕುಳಿತರೆ ಹಕ್ಕುಗಳು ದೊರೆಯಲಾರವು. ಯಾವುದೇ ವೇದಿಕೆಯಾಗಲಿ ಅದರ ಮುಖಾಂತರ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ಹೇಳುತ್ತಲೇ ಮಹಿಳಾ ಸಂಘಟನೆಗಳ ಮಿತಿಗಳನ್ನು ಹೇಳಿ ಅವುಗಳನ್ನು ಮೀರಬೇಕು ಎಂದು ಮಹಿಳೆಯರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಈ ಅಭಿಪ್ರಾಯ ಪಾಶ್ಚಾತ್ಯ ದೇಶಗಳಲ್ಲಿ ಮಹಿಳಾ ವಿಮೋಚನೆಗಾಗಿ ನಡೆಯುತ್ತಿದ್ದ ಹೋರಾಟಗಳ ಪ್ರಭಾವಕ್ಕೆ ಒಳಗಾಗಿದ್ದನ್ನು ಸೂಚಿಸುತ್ತದೆ. ಮಹಿಳೆಯರ ಶಿಕ್ಷಣಕ್ಕೆ ಸಂಬಂಧಿಸಿ ಅವರದೇ ಆದ ವಿಚಾರಗಳಿದ್ದವು. ಈ ವಿಚಾರಗಳು ಸಂಸ್ಕಾರ, ನಡೆ, ನುಡಿಗೆ ಸಂಬಂಧಿಸಿ ಪುರಾಣ ಮೂಲದಿಂದ ಹುಟ್ಟಿದವುಗಳು. ಏನೇ ಇದ್ದರೂ ಹೆಣ್ಣಿಗೆ ಅಕ್ಷರದ ಬಾಗಿಲನ್ನು ಮಾತ್ರ ನಿಚ್ಚಳವಾಗಿ
ತೆರೆದರು. ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯಗಳು ಕಣ್ಣೆದುರಿಗಿದ್ದ ಕಾರಣ ಸ್ತ್ರೀಯರು ಗಂಡಸಿನ ಕಾಮದ ವಸ್ತುವಲ್ಲವೆಂದು ಹೇಳುವಾಗ ಚೈತನ್ಯವಾದ ನಿಸರ್ಗನ್ಯಾಯ ಸಹಾಯಕ್ಕೆ ಬಂದಂತೆ ಕಾಣಿಸುತ್ತದೆ.
ಗಾಂಧೀಜಿಯವರ ಅಭಿಪ್ರಾಯದಲ್ಲಿ ಗಂಡು ಹೆಣ್ಣುಗಳಲ್ಲಿ ಪ್ರಕೃತಿ ವ್ಯತ್ಯಾಸವನ್ನು ರೂಪಿಸಿದೆ. ಆಕೆಗೂ ತನಗೆ ಏನು ಬೇಕು ಬೇಡ ಎಂಬುದರ ಕುರಿತು ತೀರ್ಮಾನಿಸುವ ಹಕ್ಕಿದೆ. ಹೆಣ್ಣು ಗಂಡುಗಳು ಪ್ರಕೃತಿಯ ಸೃಷ್ಟಿಯೆಂದಾಗ ಇಬ್ಬರೂ ಒಂದೇ ಆಗಿರಬೇಕು. ಹೀಗಾಗಿ ಇಬ್ಬರ ಸಮಸ್ಯೆಗಳು ಒಂದೇ ಆಗಿರುತ್ತವೆ. ಇಬ್ಬರಲ್ಲಿಯು ಇರುವ ಜೀವ ಪರಮಾತ್ಮನದ್ದಾಗಿರುತ್ತದೆ. ಒಬ್ಬರಿಗೊಬ್ಬರು ಪೂರಕವೆಂಬ ಆಧ್ಯಾತ್ಮವಾದಿ ಹೇಳಿಕೆ ವಾಸ್ತವವಾಗಲು ಇಂದಿಗೂ ಕಾಲ ಸಹಕರಿಸುತ್ತಿಲ್ಲ. ಅಹಿಂಸೆಯನ್ನು ಬಲವಾಗಿ ಪ್ರತಿಪಾದಿಸಿದ ಮತ್ತು ಅದನ್ನು ಪ್ರಯೋಗಿಸುವುದರ ಮೂಲಕ ಅದರ ಶಕ್ತಿಯನ್ನು ಮನಗಂಡ ಗಾಂಧಿ ಅಹಿಂಸೆಯ ಇನ್ನೊಂದು ಅವತಾರ ಸ್ತ್ರೀ ಎನ್ನುತ್ತಾ ಅನಂತವಾದ ಪ್ರೀತಿ, ನಂಬಿಕೆ, ವಿಶ್ವಾಸವೇ ಅಹಿಂಸೆ ಎಂದು ವ್ಯಾಖ್ಯಾನಿಸುತ್ತಾರೆ. ಇದಕ್ಕೆ ಅವರು ಹೆಣ್ಣಿನ ತಾಯ್ತನವನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಾರೆ. ಪ್ರಕೃತಿ ಪುರುಷ ಗುಣಸ್ವಭಾವಗಳು ಹೆಣ್ಣು ಗಂಡುಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಇರುವುದಿಲ್ಲ. ಎಲ್ಲ ಗುಣಗಳು ಎಲ್ಲರಲ್ಲಿಯೂ ಇರುತ್ತವೆ. ನಾವೇ ಈ ಗುಣಗಳು ಇವರಲ್ಲಿರಬೇಕು ಎಂದು ಗೆರೆ ಕೊರೆದಿದ್ದೇವೆ. ಅದನ್ನು ನಾವೇ ಅಳಿಸಬೇಕು ಎನ್ನುತ್ತಾರೆ. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅತೀ ಮುಖ್ಯವೆಂದು ಪ್ರತಿಪಾದಿಸುತ್ತಾರೆ.
ಪುರುಷ ಪ್ರಧಾನ ವ್ಯವಸ್ಥೆಯ ಬಹುದೊಡ್ಡ ಸಮಸ್ಯೆಯೆಂದರೆ ಹೆಣ್ಣನ್ನು ನಂಬದೆ ಇರುವುದು. ಇದನ್ನು ಗಾಂಧೀಜಿ ವಿರೋಧಿಸುತ್ತಾರೆ. ಹೆಣ್ಣುಮಕ್ಕಳನ್ನು ನಂಬಬೇಕು ಮತ್ತು ಗಂಡಸರು ನಂಬಲರ್ಹ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳುವಾಗಲೆಲ್ಲ ಗಾಂಧೀಜಿ ತಮ್ಮನ್ನು ಹೊರಗಿಟ್ಟುಕೊಂಡು ಮಾತನಾಡಿದರು ಎನಿಸುತ್ತದೆ. ಶೀಲ ಶುಚಿತ್ವಗಳ ಬಗ್ಗೆ ಗಾಂಧೀಜಿಯವರಲ್ಲಿ ಇದ್ದ ಅಭಿಪ್ರಾಯಗಳು ಕೇವಲ ಮಹಿಳೆಗೆ ಬೋಧಿಸಿದವುಗಳಲ್ಲ. ಅವು ಗಂಡಸರಿಗೂ ಅನ್ವಯಿಸಿ ಹೇಳಿದ ಮಾತುಗಳು. ಗಾಂಧಿ ವಿಚಾರಧಾರೆಗೆ ಸಂಬಂಧಿಸಿ ಸ್ತ್ರೀವಾದಿ ಸಿದ್ಧಾಂತದ ಹಿನ್ನೆಲೆಯಿಂದ ಮಹಿಳೆಯರು ಪ್ರಶ್ನೆಗಳನ್ನು ಎತ್ತಿರುವರು. ಸೂಕ್ಷ್ಮವಾಗಿ ಗಮನಿಸಿದರೆ ನಾವು ಅವರ ವಿಚಾರಧಾರೆಗಳಿಗಿಂತಲೂ ಅವರು ಬಳಸಿದ ತಂತ್ರಗಾರಿಕೆಗೆ ಸಂಬಂಧಿಸಿ ಮಾತನಾಡುವ ಅಗತ್ಯವಿದೆಯೆನಿಸುತ್ತದೆ.
ಎಂದಿಗಿಂತಲೂ ಇಂದು ಹೆಚ್ಚು ಗಾಂಧಿ ನಮ್ಮನ್ನು ಆವರಿಸಿಕೊಳ್ಳಬೇಕಾಗಿದೆ. ಚರಿತ್ರೆಯ ಶವಪರೀಕ್ಷೆಯೊಂದಿಗಿನ ನಮ್ಮ ವರ್ತಮಾನದ ಒಡನಾಟ ಸೃಷ್ಟಿಸಿರುವ ಅಸಹಿಷ್ಣುತೆಯ ಕುರಿತು ಗಾಂಧೀಜಿಯವರನ್ನು ಕೇಂದ್ರವಾಗಿಸಿಕೊಂಡು ಪರಿಹಾರಗಳನ್ನು ಹುಡುಕಬೇಕಾಗಿದೆ. ಒಂದು ಕಾಲದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಳಲ್ಲಿ ರೂಪುಗೊಂಡಿರುವ ವ್ಯಕ್ತಿಗಳನ್ನು ಭಿನ್ನ ಭಿನ್ನ ಪರಿಸರದಲ್ಲಿ ಪರಿಭಾವಿಸುವಾಗ ಇರಬೇಕಾದ ತಾಳ್ಮೆ, ಸಹನೆ ಮರೆಯಾಗುತ್ತಿರುವುದರಿಂದ ನಮಗೆ ಗಾಂಧಿತಾತ ಗಾಂಧಿಯಾಗಿ ಕಾಡುತ್ತಿಲ್ಲ. ವಾಸ್ತವದ ನಗ್ನ ಸತ್ಯಗಳನ್ನು ಅರ್ಥಮಾಡಿಕೊಳ್ಳುವ ವಿವೇಕವು ಇಲ್ಲದೆ ನಮ್ಮೊಳಗಿನ ಅಹಂಕಾರದಿಂದ ಗಾಂಧಿಯನ್ನಲ್ಲ ಯಾರನ್ನು ಸಂಧಿಸಲು ಮುಂದಾದರೂ ಕೇವಲ ದೌರ್ಬಲ್ಯಗಳೇ ಕಾಣಿಸುವ ಅಪಾಯಗಳಿವೆ. ಗಾಂಧಿ ಬಾಲ್ಯದಿಂದ ನಮ್ಮೊಂದಿಗೆ ಬೆನ್ನು ಹತ್ತಿರುವುದು ಕೂಡಾ ಕಾಲದ ಅಗತ್ಯ. ಕಾಲದ ಅಗತ್ಯದೊಂದಿಗೆ ಗಾಂಧೀ, ಕಸ್ತೂರಬಾರವರು ವೈಯಕ್ತಿಕವಾಗಿ ಕಳೆದುಕೊಂಡು ಚಾರಿತ್ರಿಕವಾಗಿ ಪಡೆದುಕೊಂಡಿರುವ ಅಂತಿಮ ಸತ್ಯಗಳು ನಮಗೆ ಕಂಡರೆ ಸಹಿಷ್ಣುತೆಯೆಂಬುದು ಪದವಾಗಿ ಉಳಿಯದೆ ಪದಾರ್ಥವಾಗಿ ನಮ್ಮ ವಿವೇಕದಲ್ಲಿ ಜೀರ್ಣಗೊಳ್ಳಬಲ್ಲದು. ಗಾಂಧೀ ಕೇವಲ ಗಾಂಧೀಯಲ್ಲ. ಗಾಂಧಿ ಪರಿಪೂರ್ಣಗೊಳ್ಳುವುದೇ ಕಸ್ತೂರಬಾ ಗಾಂಧಿಯೊಂದಿಗೆ ಎಂಬುದನ್ನು ಕಾಲ ಒಪ್ಪಬೇಕು.