ರೈತ ರತ್ನ ಮಹೇಶ ಸೂಡಿ
ವಿಭಾಗ: ಕೃಷಿ ತಂತ್ರಜ್ಞಾನ    
ಊರು, ಜಿಲ್ಲೆ: ಅಣ್ಣೀಗೆರಿ, ಗದಗ ಜಿಲ್ಲೆ

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಕಾರ್ಮಿಕರ ಕೊರತೆ ನೀಗಿಸಲು ಅಣ್ಣೀಗೆರಿ ರೈತನೊಬ್ಬ ವಿವಿಧ ಕೃಷಿ ಸಲಕರಣೆಗಳನ್ನು ತಯಾರಿಸುವ ಮೂಲಕ ರೈತರಿಗೆ ಸಹಕಾರಿಯಾಗಿದ್ದಾನೆ. ಪದವಿ ಓದು ಮುಗಿಸಿ ವಂಶ ಪಾರಂಪರ್ಯವಾಗಿ ಬಂದಿರುವ ಕೃಷಿ ಕಾಯಕದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಯುವ ಕೃಷಿಕ ಮಹೇಶ ಸೂಡಿ. ಕಳೆದ 10 ವರ್ಷಗಳಿಂದ 4 ಎಕರೆ ಜಮೀನಿನ ಬಿತ್ತನೆ ಹಾಗೂ ಔಷಧಿ ಸಿಂಪಡಿಸಲು ಕೂರಿಗೆ ಹಾಗೂ ಔಷಧಿ ಸಿಂಪಡಣೆ ಯಂತ್ರಗಳ ಬಳಕೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಬಿತ್ತನೆಗೆ ಕೃಷಿ ಕೂಲಿಕಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಟ್ರ್ಯಾಕ್ಟರ್ ಕೂರಿಗೆ ತಯಾರಿಸಿ ಬಿತ್ತನೆಗೆ ಆರಂಭಿಸಿದ್ದಾರೆ. ಮುಂಗಾರು ಹಾಗೂ ಹಿಂಗಾರು ಹಂಗಾಮು ಬಿತ್ತನೆಗೆ ಪೂರ್ವದಲ್ಲೆ ಕೂರಿಗೆ ಖರೀದಿಗೆ ಇಲ್ಲಿನ ಕೃಷಿಕರು ಬೇಡಿಕೆ ಇಡುತ್ತಾರೆ. ಕಳೆದ 2 ವರ್ಷಗಳಿಂದಲೂ ಕೂರಿಗೆಗೆ ಜನಪ್ರಿಯತೆ ಏರಿಕೆಯಾಗುತ್ತಿದೆ. ವಿಜಯಪುರ ವಿಶ್ವವಿದ್ಯಾಲಯದಲ್ಲಿ ಕೂರಿಗೆಯ ಟೆಸ್ಟ್ ನಡೆದಿದ್ದು, ಕೃಷಿ ಇಲಾಖೆಯ ಸಬ್ಸಿಡಿ ದರಕ್ಕೆ ಸೇರಿಸುವ ಇಂಗಿತವನ್ನು ಮಹೇಶ ಸೂಡಿ ಹೊಂದಿದ್ದಾರೆ. ಈವರೆಗೂ (60 ಸಾವಿರಕ್ಕೆ ಒಂದರಂತೆ) 15 ಲಕ್ಷಕ್ಕೆ 25 ಕೂರಿಗೆಗಳನ್ನು ಮಾರಾಟ ಮಾಡಿದ್ದಾರೆ. ಕೂರಿಗೆಯು ಸುಲಭ ಬಿತ್ತನೆಗೆ ಸಹಕಾರಿಯಾಗಿದೆ.

ಸಾಧನೆಯ ವಿವರ: 

  1. ಬಿತ್ತನೆ ಕೂರಿಗೆ
  2. ಸ್ಪ್ರೇ ಮಷೀನ್
  3. ಟಿಲ್ಲರ್ ಸಂಬಂಧಿಸಿದಂತೆ, ಕುಂಟಿ, ಎಡೆಕುಂಟಿ, ಮಡಿಕೆ, ಬಿತ್ತನೆ ಓಡು ಕಟ್ಟುವ ಯಂತ್ರ
  4. ಟ್ರ್ಯಾಕ್ಟರ್ ಟೈಯರ್ ಮೋಡಿಫಿಕೇಶನ್, ಮೂರರಿಂದ ನಾಲ್ಕು ಫೀಟ್ ಎತ್ತರದ ಬೆಳೆಯಲ್ಲಿಯೂ ಟ್ರ್ಯಾಕ್ಟರ್ ಓಡಿಸಬಹುದು.
  5. ಸೊಳ್ಳೆ ನಿಯಂತ್ರಣಕ್ಕೆ ಸ್ಪ್ರೇ ಮಷೀನ್ (ಅಣ್ಣಿಗೇರಿ ಪುರಸಭೆಗೆ ಮಾಡಿಕೊಡಲಾಗಿದೆ).

ನಾಲ್ಕು ಎಕರೆ ಜಮೀನಿನಲ್ಲಿ ಶೇಂಗಾ, ಹೆಸರು, ಕಡಲೆ, ಜೋಳ, ಬಿಟಿ ಹತ್ತಿ, ಮೆಣಸಿನಕಾಯಿ, ಎಳ್ಳು, ಉದ್ದು, ಹವೀಜ ಸೇರಿ ಹಲವಾರು ಬೆಳೆಗಳನ್ನು ಬೆಳೆಯುತ್ತಾನೆ. ಅತ್ಯಂತ ಕಡಿಮೆ ಸಮಯದಲ್ಲಿ ಗಂಟೆಯಲ್ಲೆ ಸುಮಾರು 6 ರಿಂದ 8 ಎಕರೆಗೂ ಹೆಚ್ಚು ಬಿತ್ತನೆ ಮಾಡಬಹುದಾದ ಟ್ರ್ಯಾಕ್ಟರ್ ಕೂರಿಗೆ ಸಂಶೋಧಿಸಿದ್ದಾರೆ. 4,6 ಹಾಗೂ 8 ತಾಳಗಳ ಕೂರಿಗೆಯಲ್ಲಿ ದಿನ ಒಂದಕ್ಕೆ 60 ಎಕರೆಯನ್ನು 3000 ರು. ಖರ್ಚಿನಲ್ಲೇ ಬಿತ್ತನೆ ಮಾಡಬಹುದು.

ಕಾಡು ಬೆಕ್ಕಿನ ಮಲದಿಂದ ಕಾಫಿ ಬೀಜ ಹೆಕ್ತಾರೆ: ಇವರ ಸಿವೆಟ್ ಕಾಫಿ ಎಲ್ಲೆಡೆ ಫೇಮಸ್

ಸ್ಪ್ರೇ ಮಷಿನ್‌ನಿಂದ ದಿನವೊಂದಕ್ಕೆ 60 ಎಕರೆ ಜಮೀನಿಗೆ ಔಷಧಿ ಸಿಂಪಡಿಸಬಹುದಾಗಿದ್ದು ಸುಮಾರು 60-75 ಕೂಲಿಕಾರರ ವೆಚ್ಚವನ್ನು ಉಳಿತಾಯ ಮಾಡಬಹುದು. (200, 300, 500 ಲೀಟರ್ ಟ್ಯಾಂಕರ್ ಅಳವಡಿಲಾಗಿದೆ. ಸಣ್ಣ ರೈತರಿಗೆ ಟಿಲ್ಲರ್ ಸಹಕಾರಿಯಾಗಿದ್ದು, ದಿನವೊಂದಲ್ಲೆ 6 ಎಕರೆ ಎಡೆ ಹೊಡೆಯಬಹುದಾಗಿದ್ದು, 300 ರು. ಖರ್ಚು ಆಗುತ್ತದೆ.  ಹೀಗೆ ಅತ್ಯಂತ ಹಗುರವಾದ ಕೂರಿಗೆ, ಔಷಧಿ ಸಿಂಪಡಣೆ, ಹೆಚ್ಚಿನ ಕೂಲಿಕಾರರರಿಲ್ಲದೇ ಒಬ್ಬರೇ ಟ್ರ್ಯಾಕ್ಟರ್ ಮುಖಾಂತರ ಎಡೆಹೊಡೆಯುವುದು ಸುಲಭವಾಗುವುದರಿಂದ ಸಲಕರಣೆಗಳಿಗೆ ಕೃಷಿಕರ ಬೇಡಿಕೆ ಹೆಚ್ಚುತ್ತಿದೆ.

ಗಮನಾರ್ಹ ಅಂಶ:

  1. ಮೊದಲು ಅಣ್ಣಗೇರಿ ನಡುಕಟ್ಟಿನ ಕೂರಿಗೆ ಈ ಭಾಗದಲ್ಲಿ ಕೃಷಿಕರ ಗಮನ ಸೆಳೆದಿತ್ತು. ಇದನ್ನು ಮನಗಂಡ ಮಹೇಶ್, ಅಣ್ಣಿಗೇರಿ ರುಂದ್ರಾಂಗಿ ಕೂರಿಗೆ ತಯಾರಿಸಿ ಬಿತ್ತನೆಯಲ್ಲಿ ತಂತ್ರಜ್ಞಾನ ಅಳವಡಿಸಿರುವುದು.
  2. ಇಂಟರ್‌ನೆಟ್, ಯೂಟ್ಯೂಬ್ ಹಾಗೂ ಸ್ಥಳೀಯ ನಡುಕಟ್ಟು ಕೂರಿಗೆ ಬಿತ್ತನೆ ಕಾರ್ಯವೇ ಕೃಷಿ ಸಲಕರಣೆ ತಯಾರಿಸಲು ಪ್ರೇರಣೆ. 
  3. ಇವರ ರುದ್ರಾಂಗಿ ಅಗ್ರೋ ಎಂಜಿನಿಯರಿಂಗ್ ವರ್ಕ್ಸ್‌ಗೆ ಗದಗ ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ.
  4. ಎಂಜಿನಿಯರ್ ಕಾಲೇಜು ಬೋಧಕರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ರುದ್ರಾಂಗಿ ಅಗ್ರೋ ಎಂಜಿನಿಯರಿಂಗ್ ವರ್ಕ್ಸ್‌ಗೆ ಪ್ರಾಜೆಕ್ಟ್ ವರ್ಕ್‌ಗೆ ಕಳಿಸುವುದಾಗಿ ಭರವಸೆ ನೀಡಿದ್ದಾರೆ.