ಈ ಅಧಿಕಾರಿಗಳಿಗೆ ಇಷ್ಟೊಂದು ಹಣ ಹೇಗೆ ಬಂತು? ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಆರ್'ಬಿಐನ ಕಣ್ತಪ್ಪಿಸಿ ಹೊಸ ನೋಟುಗಳು ಹೇಗೆ ಬಂತು? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು(ಡಿ. 02): 2000 ರೂ. ಮುಖಬೆಲೆಯ ಕೋಟಿಗಟ್ಟಲೆ ನಗದು ಹಾಗೂ ಕೆಜಿಗಟ್ಟಲೆ ಬಂಗಾರದೊಂದಿಗೆ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಇಬ್ಬರು ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಂಡಿದೆ. ಈ ಅಧಿಕಾರಿಗಳನ್ನು ರಕ್ಷಿಸುವ ಪ್ರಮೇಯವೇ ಇಲ್ಲ. ಪ್ರತಿಪಕ್ಷಗಳಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಅವರಿಬ್ಬರ ಮನೆಗಳಲ್ಲಿ ಒಟ್ಟು 152 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಐಟಿ ಅಧಿಕಾರಿಗಳ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಹಾಕುತ್ತಿದ್ದಂತೆಯೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಅಧಿಕಾರಿಗಳಿಗೆ ಇಷ್ಟೊಂದು ಹಣ ಹೇಗೆ ಬಂತು? ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಆರ್'ಬಿಐನ ಕಣ್ತಪ್ಪಿಸಿ ಹೊಸ ನೋಟುಗಳು ಹೇಗೆ ಬಂತು? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಆಪ್ತರು ಹೇಗಾಗುತ್ತಾರೆ?
ಅಮಾನತುಗೊಂಡಿರುವ ಅಧಿಕಾರಿಗಳಲ್ಲೊಬ್ಬರಾದ ಚಿಕ್ಕರಾಯಪ್ಪ ಅವರು ಬಿಜೆಪಿ ಸರಕಾರದ ಅವಧಿಯಲ್ಲೂ ಕೆಲಸ ಮಾಡುತ್ತಿದ್ದವರು. ಇವರನ್ನ ಮುಖ್ಯಮಂತ್ರಿಗಳ ಆಪ್ತ ಎಂದು ಕರೆಯಲು ಹೇಗೆ ಸಾಧ್ಯ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
