2013 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತಂದು ತಾವೇ ಸೋಲುಂಡರು.
ಬೆಂಗಳೂರು(ಅ.9): ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಹೀಗೊಂದು ಕುತೂಹಲ ಈಗಲೇ ಆರಂಭವಾಗಿದೆ. 2013 ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪರಮೇಶ್ವರ್ಗೆ ಅಭಿಮಾನಿಗಳು ಮತ್ತು ಬೆಂಬಲಿಗರು ಬೇರೆ ಕ್ಷೇತ್ರ ಆಯ್ಕೆಗೆ ಮಾಡಿಕೊಳ್ಳಲು ಆಗ್ರಹಿಸುತ್ತಿದ್ದಾರೆ. ಚಿಕ್ಕಮಗಳೂರಿನ ಮೂಡಗೆರೆಯಿಂದ ಈ ರೀತಿಯ ಆಫರ್ ಬಂದಿದ್ದು, ನೆಲಮಂಗಲ ಮತ್ತು ಬೆಂಗಳೂರಿನ ಪುಲಕೇಶಿನಗರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಾ. ಜಿ. ಪರಮೇಶ್ವರ್ 2018 ರ ಚುನಾವಣೆಗೆ ಈಗಿನಿಂದಲೇ ಕಾರ್ಯತಂತ್ರ ಆರಂಭಿಸಿದ್ದಾರಾ ? ಹೌದು ಎನ್ನುತ್ತವೆ ಕಾಂಗ್ರೆಸ್ನ ಉನ್ನತ ಮೂಲಗಳು. 2013 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತಂದು ತಾವೇ ಸೋಲುಂಡರು.
ಪಕ್ಷವನ್ನು ಅಧಿಕಾರಕ್ಕೆ ತಂದರೂ ಅಂದಿನ ಸೋಲು ಅವರನ್ನು ಅಧಿಕಾರದಿಂದ ಎರಡು ವರ್ಷ ದೂರ ಉಳಿಯುವಂತೆ ಮಾಡಿತು. ಹೀಗಾಗಿ ಪರಮೇಶ್ವರ ಸಾಕಷ್ಟು ಬೇಸರಗೊಂಡಿದ್ದರು. ನಂತರ ಗೃಹ ಸಚಿವರಾಗಿ ಈಗ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಗೆರೆ ಮೀಸಲು ಕ್ಷೇತ್ರವಾಗಿರುವುದರಿಂದ ಅಲ್ಲಿನ ಪರಮೇಶ್ವರ್ ಕಾಂಗ್ರೆಸ್ ನಾಯಕರು ಮೂಡಗೆರೆಯಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಮೂಡಗೆರೆಯಲ್ಲಿ ಪ್ರಜ್ಞಾವಂತ ದಲಿತ ಮತದಾರರ ಇರುವುದರಿಂದ, ಅಲ್ಲದೇ, ಈ ಹಿಂದೆ ಗೆಲುವು ಪಡೆದ ಮೋಟಮ್ಮ ಹಾಗೂ ಈಗಿನ ಜೆಡಿಎಸ್ ಶಾಸಕ ಬಿ.ಬಿ. ನಿಂಗಯ್ಯ ಕೂಡ ದಲಿತರಲ್ಲಿ ಬಲಗೈ ಪಂಗಡಕ್ಕೆ ಸೇರಿರುವುದರಿಂದ ಪರಮೇಶ್ವರ್ ಕೂಡ ಅದೇ ಪಂಗಡಕ್ಕೆ ಸೇರಿದ್ದಾರೆ. ಹೀಗಾಗಿ ಅಲ್ಲಿ ಅವರಿಗೆ ಅನುಕೂಲ ಆಗಬಹುದು ಎಂಬುವುದು ಮೂಡಗೆರೆ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
ಆದರೆ, ಪರಮೇಶ್ವರ್ ಕೊರಟಗೆರೆಯಲ್ಲಿ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದಾರೆ. ಅಲ್ಲದೇ, ತುಮಕೂರು ಜಿಲ್ಲೆ ಅವರ ರಾಜಕೀಯ ಹಾಗೂ ವ್ಯವಹಾರಿಕ ಕ್ಷೇತ್ರವಾಗಿರಿವುದರಿಂದ ಜಿಲ್ಲೆಯಿಂದ ದೂರ ಹೋಗಿ ರಾಜಕೀಯ ಮಾಡುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಪರಮೇಶ್ವರ್ ತುಮಕೂರಿಗೆ ಹತ್ತಿರದ ಬೆಂಗಳೂರು ನಗರದ ಪುಲಕೇಶಿನಗರ ಹಾಗೂ ನೆಲಮಂಗಲ ಮೀಸಲು ಕ್ಷೇತ್ರಗಳ ಬಗ್ಗೆಯೂ ಯೋಚನೆ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಕೊರಟಗೆರೆ ಕ್ಷೇತ್ರಕ್ಕೆ ವಲಸೆ ಹೋಗಿ ವಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳದ ಪರಮೇಶ್ವರ್ ಮುಂದಿನ ಬಾರಿಯೂ ಕೊರಟಗೆರೆ ಕ್ಷೇತ್ರದ ಮತದಾರರು ಕೈ ಹಿಡಿಯುವ ಬಗ್ಗೆ ಅನುಮಾನ ಇರುವುದರಿಂದ ಅವರ ಬೆಂಬಲಿಗರೇ ಅವರಿಗಾಗಿ ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಆದರೆ ತುಮಕೂರು ಪರಮೇಶ್ವರ್ ಅವರ ವ್ಯವಹಾರದ ಕಾರ್ಯಕ್ಷೇತ್ರವೂ ಆಗಿರುವುದರಿಂದ ಜಿಲ್ಲೆಯನ್ನು ಬಿಟ್ಟು ಬೇರೆಡೆಗೆ ಹೋಗುತ್ತಾರಾ ಅಥವಾ ಅದೇ ಕ್ಷೇತ್ರದಲ್ಲಿ ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗಿಳಿಯುತ್ತಾರಾ ಎಂಬುವುದು ಕುತೂಹಲ ಮೂಡಿಸಿದೆ.
ವರದಿ: ಶಂಕರ ಪಾಗೋಜಿ. ಸುವರ್ಣ ನ್ಯೂಸ್, ಬೆಂಗಳೂರು.
