ಕೇಂದ್ರ ತಾರತಮ್ಯ: ದಕ್ಷಿಣ ರಾಜ್ಯಗಳ ವಿತ್ತ ಸಚಿವರ ಸಭೆ

Fund allocation by Center south indian states to have a meeting
Highlights

ದಕ್ಷಿಣ ರಾಜ್ಯಗಳಿಗೆ ಅನುದಾನ ತಾರತಮ್ಯ ವಿರುದ್ಧದ ಧ್ವನಿಗೆ ಮತ್ತಷ್ಟುಬಲ

ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಭೆ ಕರೆದ ಕೇರಳ

- ಏಪ್ರಿಲ್‌ 10ರಂದು ಮಾತುಕತೆಗೆ ಬರಲು ಆಹ್ವಾನ

ತಿರುವನಂತಪುರಂ: ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಹಣಕಾಸು ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಇನ್ನಷ್ಟುಬಲ ಪಡೆದುಕೊಂಡಿದೆ. 15ನೇ ಹಣಕಾಸು ಆಯೋಗ ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಚರ್ಚೆನಡೆಸಲು ಮತ್ತು ಆ ವಿಷಯವಾಗಿ ಒಂದು ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಿಂದ ಕೇರಳ ಸರ್ಕಾರ ಏ.10ರಂದು ದಕ್ಷಿಣ ಭಾರತದ ರಾಜ್ಯಗಳ ಹಣಕಾಸು ಸಚಿವರ ಸಭೆಯೊಂದನ್ನು ಕರೆದಿದೆ.

ಈ ಸಂಬಂಧ ಕೇರಳ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಅವರು ದಕ್ಷಿಣ ಭಾರತದ ರಾಜ್ಯಗಳ ಹಣಕಾಸು ಸಚಿವರಿಗೆ ಪತ್ರವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ದೂರವಾಣಿಯ ಮೂಲಕ ವೈಯಕ್ತಿಕವಾಗಿ ರಾಜ್ಯಗಳ ಸಚಿವರನ್ನು ಸಂಪರ್ಕಿಸಿ ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ. ಥಾಮಸ್‌ ಐಸಾಕ್‌ ಅವರ ಕೋರಿಕೆಗೆ ಇತರ ರಾಜ್ಯಗಳ ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ವಿರುದ್ಧ ಅಸಮಾಧಾನ ಏಕೆ?:

ರಾಷ್ಟ್ರೀಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಹೊರತಾಗಿಯೂ ದಕ್ಷಿಣ ಭಾರತದ ರಾಜ್ಯಗಳ ಅನುದಾನದಲ್ಲಿ ಖೋತಾ ಮಾಡಲಾಗಿದೆ ಎಂದು ಥಾಮಸ್‌ ಐಸಾಕ್‌ ಆರೋಪಿಸಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಕೇದ್ರದ ಅನುದಾನ ಹಂಚಿಕೆಗೆ 2011ರ ಜನಗಣತಿಯನ್ನು ಆಧಾರವಾಗಿ ಬಳಸಬೇಕು ಎಂದು ತಿಳಿಸಲಾಗಿದೆ. ಇದು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಲಾಗುತ್ತಿದೆ.

1971ರಿಂದ ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿವೆ. ಹೀಗಾಗಿ ಈ ರಾಜ್ಯಗಳ ಜನಸಂಖ್ಯೆಯ ಏರಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಒಂದು ವೇಳೆ 2011ರ ಜನಗಣತಿಯನ್ನು ಅನುದಾನ ಹಂಚಿಕೆಗೆ ಮಾನದಂಡವಾಗಿ ಪರಿಗಣಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯುವ ಆದಾಯದಲ್ಲಿ ಕೊರತೆ ಉಂಟಾಗಲಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಿಂದ ರಾಜ್ಯ ಸರ್ಕಾರಗಳು ಸಾಲ ಪಡೆಯುವ ಸಾಮರ್ಥ್ಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಕೂಡ ದಕ್ಷಿಣದ ರಾಜ್ಯಗಳ ಚಿಂತೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮುನ್ನ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಫೋಸ್ಟ್‌ವೊಂದನ್ನು ಪ್ರಕಟಿಸಿದ್ದರು. ಬಳಿಕ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಕೇಂದ್ರ ಸರ್ಕಾರದ ಹಣಕಾಸು ನೀತಿಯನ್ನು ಟೀಕಿಸಿ ಬಿಜೆಪಿಯೇತರ 10 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದರು. 15ನೇ ಹಣಕಾಸು ಆಯೋಗ ರಚನೆ, ನ್ಯಾಯದ ಅಣಕ ಎಂದು ಟೀಕಿಸಿದ್ದ ಸ್ಟಾಲಿನ್‌, ಅದು ಪ್ರಗತಿಪರ ರಾಜ್ಯಗಳಿಗೆ ಕೇಂದ್ರದ ಅನುದಾನವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ಹೇಳಿದ್ದರು.

loader