ನವದೆಹಲಿ (ಆ. 06): ಜಮ್ಮು-ಕಾಶ್ಮೀರಕ್ಕಿದ್ದ ರಾಜ್ಯ ಸ್ಥಾನಮಾನ ಹಿಂಪಡೆದು ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದು ತಾತ್ಕಾಲಿಕ. ಪರಿಸ್ಥಿತಿ ಸುಧಾರಿಸಿದರೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಸೂಕ್ತ ಕಾಲದಲ್ಲಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ನಿಷ್ಕಿ್ರಯಗೊಳಿಸುವ ನಿರ್ಣಯವನ್ನು ರಾಜ್ಯಸಭೆಯಲ್ಲಿ ಮಂಡಿಸಿ ಸೋಮವಾರ ಅವರು ಮಾತನಾಡಿದರು. ಎಷ್ಟುಕಾಲದವರೆಗೆ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರಲಿದೆ ಎಂದು ಹಲವಾರು ಸಂಸದರು ಕೇಳಿದ್ದಾರೆ.

ಪರಿಸ್ಥಿತಿ ಸುಧಾರಣೆಯಾಗಿ ಸೂಕ್ತ ಸಮಯ ಬಂದಾಗ ಮತ್ತೊಮ್ಮೆ ರಾಜ್ಯವನ್ನಾಗಿಸುತ್ತೇವೆ ಎಂದು ಭರವಸೆ ನೀಡಿದ್ದೇನೆ. ಆದರೆ ಆ ಸಮಯ ಒಂದಷ್ಟುದೀರ್ಘವಾಗಬಹುದು. ಮುಂದೊಂದು ದಿನ ರಾಜ್ಯವಾಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮು-ಕಾಶ್ಮೀರ ಭೂಲೋಕದ ಸ್ವರ್ಗ. ಅದು ಇನ್ನು ಮುಂದೆಯೂ ಅದೇ ರೀತಿ ಇರಲಿದೆ. ಮುಂದೆ ಏನೂ ಆಗುವುದಿಲ್ಲ. ಇದು ಮತ್ತೊಂದು ಕೊಸೊವೊ (ಆಗ್ನೇಯ ಯುರೋಪಿನ ವಿವಾದಗ್ರಸ್ತ ಪ್ರದೇಶ) ಆಗಲು ಬಿಡುವುದಿಲ್ಲ ಎಂದು ಹೇಳಿದರು.

370 ನೇ ತಾತ್ಕಾಲಿಕ ಸೌಲಭ್ಯ. ಇದನ್ನು ಎಷ್ಟುಕಾಲ ಮುಂದುವರಿಸಿಕೊಂಡು ಹೋಗಬೇಕು? ಈ ವಿಧಿಯನ್ನು ನಿಷ್ಕಿ್ರಯಗೊಳಿಸುತ್ತಿರುವುದಕ್ಕೆ ಭಯೋತ್ಪಾದನೆಯೇ ಕಾರಣ. 370ನೇ ವಿಧಿ ಇಲ್ಲದೇ ಇದ್ದಿದ್ದರೆ ಕಣಿವೆ ರಾಜ್ಯದಲ್ಲಿ 41 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಮಹಿಳಾ ವಿರೋಧಿ ಕಲಂ ಇದಾಗಿದ್ದು, ಭಯೋತ್ಪಾದನೆಗೆ ಮೂಲವಾಗಿದೆ. ಕಾಶ್ಮೀರದಲ್ಲಿನ ರಕ್ತಪಾತ ಹಾಗೂ ಹಿಂಸೆಗೆ 370ನೇ ವಿಧಿ ರದ್ದು ಮಂಗಳ ಹಾಡಲಿದೆ. ಕಾಶ್ಮೀರದ ಪ್ರಗತಿ, ಸೂಕ್ತ ಆರೋಗ್ಯ ಸೌಕರ್ಯ, ಶಿಕ್ಷಣ ಹಾಗೂ ಕೈಗಾರಿಕೆಗಳಿಗೆ ಕೊಕ್ಕೆ ಹಾಕಿದ್ದು ಇದೇ ವಿಧಿ ಎಂದು ಹೇಳಿದರು.

ಜಮ್ಮು- ಕಾಶ್ಮೀರ ಭಾರತದ ಮುಕುಟಮಣಿ. ನಮಗೆ ಐದು ವರ್ಷ ಕೊಡಿ. ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿಸುತ್ತೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಸರಾಸರಿಗೆ ಅನುಗುಣವಾಗಿ ರಿಯಲ್‌ ಎಸ್ಟೇಟ್‌ ಬೆಲೆಗಳು ಜಮ್ಮು-ಕಾಶ್ಮೀರದಲ್ಲಿ ಏರಿಕೆಯಾಗಿಲ್ಲ. ದೇಶದ ಇತರೆಡೆಗೆ ಹೋಲಿಸಿದರೆ ಕಣಿವೆ ರಾಜ್ಯದಲ್ಲಿ ಸಿಮೆಂಟ್‌ ಬೆಲೆ ಒಂದು ಚೀಲಕ್ಕೆ 100 ರು. ಹೆಚ್ಚಿದೆ. ಹೊರಗಿನವರು ಭೂಮಿ ಖರೀದಿಸುವಂತಿಲ್ಲ ಎಂಬ ನಿರ್ಬಂಧದಿಂದ ರಾಜ್ಯ ಅಭಿವೃದ್ಧಿ ಹೊಂದಿಲ್ಲ.

370ನೇ ವಿಧಿಯಿಂದಾಗಿ ಯಾವುದೇ ಕೈಗಾರಿಕೆಯೂ ತಲೆ ಎತ್ತಿಲ್ಲ. ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಕಾಶ್ಮೀರದಲ್ಲಿ ಜಾರಿಯಾಗಿಲ್ಲ. ಶಿಕ್ಷಣ ಸೌಲಭ್ಯದಿಂದ ಕಣಿವೆ ಮಕ್ಕಳೇಕೆ ಹೊರಗುಳಿಯಬೇಕು. 370ನೇ ವಿಧಿ ರದ್ದುಗೊಳಿಸುವುದರಿಂದ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಲಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯಾನಂತರ 70 ವರ್ಷಗಳಿಂದ ಕಣಿವೆ ರಾಜ್ಯವನ್ನು ಆಳಿದ ಮೂರು ಕುಟುಂಬಗಳು ಪ್ರಜಾಪ್ರಭುತ್ವ ಪಸರಿಸಲು ಬಿಟ್ಟಿಲ್ಲ. ಬದಲಿಗೆ ಭ್ರಷ್ಟಾಚಾರ ಸೃಷ್ಟಿಸಿವೆ. ಆ ಮೂರೇ ಕುಟುಂಬಗಳು ಪ್ರಜಾಪ್ರಭುತ್ವಕ್ಕೆ ಕಣಿವೆ ರಾಜ್ಯದಲ್ಲಿ ಹಾನಿ ಮಾಡಿವೆ. ಆ ರಾಜ್ಯದಲ್ಲಿನ ಬಡತನಕ್ಕೆ 370ನೇ ಕಲಂ ಕಾರಣ. ಕೇಂದ್ರ ಸರ್ಕಾರದಿಂದ ಜಮ್ಮು- ಕಾಶ್ಮೀರಕ್ಕೆ ತಲಾ 14,255 ಕೋಟಿ ರು. ಅನುದಾನ ಸಿಗುತ್ತದೆ. ಆದರೆ ರಾಷ್ಟ್ರೀಯ ಸರಾಸರಿ 3681 ರು. ಇದೆ ಎಂದು ವಿವರಿಸಿದರು.