ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ನಿತ್ಯ ಪರಿಷ್ಕರಣೆಯಾಗುವ ವ್ಯವಸ್ಥೆ ಶುಕ್ರವಾರದಿಂದ ಆರಂಭವಾಗಲಿದೆ. ಈವರೆಗೆ 5 ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ವ್ಯವಸ್ಥೆ ಈಗ ದೇಶದ ಎಲ್ಲೆಡೆ ಜಾರಿಯಾಗುತ್ತಿದೆ.
ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆಯಾಗುವ ವ್ಯವಸ್ಥೆ ಶುಕ್ರವಾರದಿಂದ ಆರಂಭವಾಗಲಿದೆ.
ಈವರೆಗೆ 5 ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ವ್ಯವಸ್ಥೆ ಈಗ ದೇಶದ ಎಲ್ಲೆಡೆ ಜಾರಿಯಾಗುತ್ತಿದೆ. ಈ ನಡುವೆ, ಈ ವ್ಯವಸ್ಥೆಯಲ್ಲಿನ ಕೆಲವು ನಿಯಮಗಳನ್ನು ವಿರೋಧಿಸಿ ಶುಕ್ರವಾರದಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಪೆಟ್ರೋಲ್ ಪಂಪ್ ಮಾಲೀಕರು ಕೈಬಿಟ್ಟಿದ್ದಾರೆ.
ಪ್ರತಿದಿನ ಮಧ್ಯರಾತ್ರಿ 12 ಗಂಟೆಯ ಬದಲು ಪರಿಷ್ಕೃತ ದರವನ್ನು ಬೆಳಗ್ಗೆ 6 ಗಂಟೆಯಿಂದ ಜಾರಿಗೊಳಿಸುವಂತೆ ಬಂಕ್ ಮಾಲೀಕರು ಇಟ್ಟಿದ್ದ ಪ್ರಮುಖ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಮುಷ್ಕರ ರದ್ದಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈವರೆಗೆ ಪ್ರತಿ ತಿಂಗಳು 1ನೇ ತಾರೀಖು ಹಾಗೂ 16ನೇ ತಾರೀಖಿನಿಂದ ಪರಿಷ್ಕೃತ ದರಗಳು ಅನ್ವಯವಾಗುತ್ತಿದ್ದವು. ಆದರೆ ಇನ್ನು ದೇಶದ ಎಲ್ಲ 54 ಸಾವಿರ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿತ್ಯ ದರ ಪರಿಷ್ಕರಣೆಯಾಗಲಿದೆ. ಮಾರುಕಟ್ಟೆದರ ಏರಿಳಿತಗೊಳ್ಳುವ ರೀತಿ ಇಲ್ಲೂ ದರ ಏರಿಳಿತವಾಗುತ್ತಿರುತ್ತದೆ.
