ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

Fuel price increased
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ತಡೆ ಹಿಡಿಯಲಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯನ್ನು ಕಳೆದ ವಾರದಿಂದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಆರಂಭಿಸಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುತ್ತಿದೆ.

ನವದೆಹಲಿ (ಮೇ. 21):  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ತಡೆ ಹಿಡಿಯಲಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯನ್ನು ಕಳೆದ ವಾರದಿಂದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಆರಂಭಿಸಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುತ್ತಿದೆ.

ಭಾನುವಾರ ಒಂದೇ ದಿನ ಲೀಟರ್ ಪೆಟ್ರೋಲ್ ಬೆಲೆಯನ್ನು 33 ಪೈಸೆ, ಡೀಸೆಲ್ ಬೆಲೆಯನ್ನು 26 ಪೈಸೆಯಷ್ಟು ತೈಲ ಕಂಪನಿಗಳು ಹೆಚ್ಚಳ ಮಾಡಿವೆ. ಇದರ ಫಲವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆಯ 76.24 ರು.ಗೆ ತಲುಪಿದ್ದರೆ, ಡೀಸೆಲ್ ಕೂಡ ಇದೇ ಮೊದಲ ಬಾರಿಗೆ 67.57 ರು.ಗೆ ಏರಿಕೆ ಕಂಡಿದೆ. 2017 ರ ಜೂನ್ ಮಧ್ಯಭಾಗದಿಂದ ಪ್ರತಿನಿತ್ಯ ತೈಲ ಬೆಲೆ ಪರಿಷ್ಕರಣೆಯಾಗುತ್ತಿದ್ದು, ಒಂದೇ ದಿನ ಪೆಟ್ರೋಲ್ ಬೆಲೆಯನ್ನು 33 ಪೈಸೆಯಷ್ಟು ಹೆಚ್ಚಳ ಮಾಡಿರುವುದು ಇದೇ ಮೊದಲು.

ಇದು ದೆಹಲಿ ಕತೆಯಾದರೆ, ದೇಶದ ವಿವಿಧ ಸ್ಥಳಗಳಲ್ಲಿ ಸ್ಥಳೀಯ ತೆರಿಗೆ ಅಧಿಕ ಪ್ರಮಾಣದಲ್ಲಿದೆ. ಹೀಗಾಗಿ ದೇಶದಲ್ಲೇ ಮುಂಬೈನಲ್ಲಿ ಪೆಟ್ರೋಲ್ ದುಬಾರಿ ಎನಿಸಿಕೊಂಡಿದೆ. ಅಲ್ಲಿ ಲೀಟರ್ ಪೆಟ್ರೋಲ್‌ಗೆ 84.07 ರು. ಹಣವನ್ನು ಗ್ರಾಹಕರು ಪಾವತಿಸಬೇಕಾಗಿದೆ. ಭೋಪಾಲ್, ಪಟನಾ, ಹೈದರಾಬಾದ್, ಶ್ರೀನಗರಗಳಲ್ಲೂ ಪೆಟ್ರೋಲ್ ಬೆಲೆ 80 ರು. ಗಡಿ ದಾಟಿ ಮುಂದೆ ಸಾಗುತ್ತಿದೆ.

ಪಣಜಿಯಲ್ಲಿ ಹಲವು ಸುಂಕಗಳಿಗೆ ವಿನಾಯಿತಿ ಇರುವುದರಿಂದ ದೇಶದಲ್ಲೇ ಅತಿ ಕಡಿಮೆ ಎಂದರೆ 70.26 ರು. ಇದೆ. ಡೀಸೆಲ್ ಬೆಲೆ ಹೈದರಾಬಾದ್‌ನಲ್ಲಿ ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿದ್ದು, ಲೀಟರ್‌ಗೆ 73.45 ರು.ಗೆ ಏರಿದೆ. ತಿರುವನಂತಪುರದಲ್ಲಿ 73.34 ರು. ಇದೆ.

ಕರ್ನಾಟಕದಲ್ಲಿ ಈ ಹಿಂದೆ ಪೆಟ್ರೋಲ್ ಬೆಲೆ 80 ರು. ಗಡಿ ಮುಟ್ಟಿದ ನಿದರ್ಶನ ಇದೆಯಾದರೂ, ಸದ್ಯ ಲೀಟರ್ ಪೆಟ್ರೋಲ್‌ಗೆ ಬೆಂಗಳೂರಿನಲ್ಲಿ 77.48 ಹಾಗೂ ಡೀಸೆಲ್‌ಗೆ 68.73 ರು. ಇದೆ. ಕಳೆದೊಂದು ವಾರದಲ್ಲಿ ಪೆಟ್ರೋಲ್ ಲೀಟರ್‌ಗೆ 1.61 ರು. ಹಾಗೂ ಡೀಸೆಲ್ 1.64 ರು.ನಷ್ಟು ಏರಿಕೆ ಕಂಡಿವೆ. 

loader