ಜುಲೈ 1ರಿಂದ ಆದಾಯ ತೆರಿಗೆ ಪಾವತಿಸಲು ಹಾಗೂ ಹೊಸ ಪ್ಯಾನ್‌ ಕಾರ್ಡ್‌ ಪಡೆಯಲು ಆಧಾರ್‌ ಕಡ್ಡಾಯ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟನೆ ನೀಡಿದೆ.
ನವದೆಹಲಿ(ಜೂ.11): ಜುಲೈ 1ರಿಂದ ಆದಾಯ ತೆರಿಗೆ ಪಾವತಿಸಲು ಹಾಗೂ ಹೊಸ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟನೆ ನೀಡಿದೆ.
‘ಆದರೆ ಈಗಾಗಲೇ ಆಧಾರ್ ಹೊಂದಿದ ವ್ಯಕ್ತಿಗಳು ಜು.1ರಿಂದ ತೆರಿಗೆ ರಿಟರ್ನ್ ಹಾಗೂ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ನಮೂದಿಸುವುದು ಕಡ್ಡಾಯ. ಜುಲೈ 1ರೊಳಗೆ ಆಧಾರ್ ಸಂಖ್ಯೆ ಪಡೆದಿರುವವರು ಕಡ್ಡಾಯವಾಗಿ ಪ್ಯಾನ್ನೊಂದಿಗೆ ಆಧಾರ್ ಸಂಯೋಜಿಸಲು ಆದಾಯ ತೆರಿಗೆ ಇಲಾಖೆಗೆ ಕೋರಿಕೆ ಸಲ್ಲಿಸಬೇಕು' ಎಂದು ತಿಳಿಸಿದೆ. ‘ಆಧಾರ್ ಹೊಂದಿಲ್ಲದವರಿಗೆ ತಾತ್ಕಾಲಿಕವಾಗಿ ವಿನಾಯಿತಿ ದೊರೆತಿದೆ.
ಆಧಾರ್ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಅಂತಹ ವ್ಯಕ್ತಿಗಳ ಪ್ಯಾನ್ ಸಂಖ್ಯೆ ರದ್ದುಗೊಳಿಸಿದರೆ ಆ ವ್ಯಕ್ತಿಗಳು ಬ್ಯಾಂಕಿಂಗ್ ವ್ಯವಹಾರ ಹಾಗೂ ಹಣಕಾಸು ಚಟುವಟಿಕೆ ನಡೆಸಲು ಆಗದು. ಹೀಗಾಗಿಯೇ ಅಂತಹವರಿಗೆ ನ್ಯಾಯಾಲಯ ವಿನಾಯಿತಿ ಕೊಟ್ಟಿದೆ' ಎಂದು ಅಧಿಕಾರಿಗಳು ವಿವರಿಸಿದ್ದಾರೆ.
