ಬೆಂಗಳೂರು[ಮಾ.17]: ಸಾರ್ವಜನಿಕವಾಗಿ ತೀವ್ರ ವಿರೋಧದ ನಡುವೆಯೂ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಟೆಂಡರ್‌ ಆಹ್ವಾನಿಸಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಕೂಡಲೇ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಗರದ 50ಕ್ಕೂ ಹೆಚ್ಚು ನಾಗರಿಕ ಸಂಘಟನೆಗಳು ಶನಿವಾರ ಬೀದಿಗಿಳಿದು ಹೋರಾಟ ನಡೆಸಿದವು.

ಸಿಟಿಜನ್‌ ಫಾರ್‌ ಬೆಂಗಳೂರು, ವೈಟ್‌ಫೀಲ್ಡ್‌ ರೈಸಿಂಗ್‌, ಬೆಂಗಳೂರು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌, ಭಾರತದ ಮಾನವ ಹಕ್ಕುಗಳ ಸಬಲೀಕರಣ ಮಂಡಳಿ, ಟೆರೇಸ್‌ ಗಾರ್ಡನಿಂಗ್‌ ಗ್ರೂಪ್‌ ಸೇರಿದಂತೆ ಅನೇಕ ಸಂಘಟನೆಗಳ ಸದಸ್ಯರು ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡು, 35 ಸಾವಿರಕ್ಕೂ ಹೆಚ್ಚು ಮರಗಳ ಮಾರಣ ಹೋಮಕ್ಕೆ ಕಾರಣವಾಗುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ತಕ್ಷಣವೇ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

‘ಬೇಡ ಬೇಡ ಎಲಿವೇಟೆಡ್‌ ಕಾರಿಡಾರ್‌ ಬೇಡ’, ‘ಬೇಕು ಬೇಕು ಚುಕುಬುಕು ಬೇಕು’, ‘ಉಳಿಸಿ ಉಳಿಸಿ ಪರಿಸರ ಉಳಿಸಿ’, ‘ಎವಿಲೇಟೆಡ್‌ ಕಾರಿಡಾರ್‌ ಬೇಡ-ಸೈಕಲ್‌ ಕಾರಿಡಾರ್‌ ಬೇಕು’ ಹೀಗೆ ಹಲವು ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ನಟ, ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ಹಿರಿಯ ನಟಿ ಅರುಂದತಿ ನಾಗ್‌, ಸಿವಿಕ್‌ ಸಂಘಟನೆಯ ಕಾತ್ಯಾಯಿನಿ ಚಾಮರಾಜ್‌ ಸೇರಿದಂತೆ ಅನೇಕ ಪರಿಸರ ವಾದಿಗಳು, ಐಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

35 ಸಾವಿರ ಮರಗಳ ರಕ್ಷಿಸಿ:

ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ನಗರದಲ್ಲಿ ಉದ್ಯಾನ ಮತ್ತು ಆಟದ ಮೈದಾನ ಸುತ್ತಮುತ್ತ ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘಟನೆಯಾಗುತ್ತದೆ. ಅಲ್ಲದೆ, .33 ಸಾವಿರ ಕೋಟಿಗಳಷ್ಟುದೊಡ್ಡ ಮೊತ್ತದ ಈ ಯೋಜನೆ ನಗರಕ್ಕೆ ಅಗತ್ಯವಿಲ್ಲ. ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ಪೋಲಾಗಲಿದೆ. ಮರ ಸಂರಕ್ಷಣೆ ಕಾಯ್ದೆ 1976ರ ಸೆಕ್ಷನ್‌ 8ರ ಅನ್ವಯ ನಗರೀಕರಣಕ್ಕಾಗಿ 50ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಎಲಿವೇಟೆಡ್‌ ಕಾರಿಡಾರ್‌ ವಿಚಾರದಲ್ಲಿ ಸರ್ಕಾರ ಏಕಮುಖವಾಗಿ ನಿರ್ಧಾರ ಕೈಗೊಂಡು ಅಭಿವೃದ್ಧಿ ಹೆಸರಲ್ಲಿ ಸರ್ಕಾರ ಜನವಿರೋಧಿ ನೀತಿ ಅನುಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೈಕಲ್‌ ಕಾರಿಡಾರ್‌ ಮಾಡಿ: ಬದಲಿ ಪರಿಹಾರ

ನಗರಕ್ಕೆ ಪರಿಸರ ಸ್ನೇಹಿಯಾದ ಸೈಕಲ್‌ ಕಾರಿಡಾರ್‌ ಯೋಜನೆಗಳು ಅಗತ್ಯವಿದೆ. ಸರ್ಕಾರ ಸೈಕಲ್‌ ಕಾರಿಡಾರ್‌ ಯೋಜನೆಗೆ ಕ್ರಮ ಕೈಗೊಳ್ಳಲಿ. ಬೆಂಗಳೂರು ನಗರದಲ್ಲಿ ಪ್ರತಿ ದಿನ ಸಂಚರಿಸುವ ಬಿಎಂಟಿಸಿಯ 6,300 ಬಸ್‌ಗಳು ಕೇವಲ ಶೇ 0.5ರಷ್ಟುಪ್ರಮಾಣದ ರಸ್ತೆ ಆಕ್ರಮಿಸುತ್ತಿವೆ. ಆದರೆ, ಖಾಸಗಿಯವರು ಬಳಸುವ ಕಾರುಗಳು ಬಸ್‌ನ ಎರಡು ಸಾವಿರ ಪಟ್ಟು ಹೆಚ್ಚು ಜಾಗ ಅಕ್ರಮಿಸಿಕೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

'ಹಣ ಮಾಡುವ ಯೋಜನೆಗಳಿಗೆ ಸರ್ಕಾರದ ಆದ್ಯತೆ’

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ನಗರಕ್ಕೆ ಮಾರಕವಾಗಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ವಿರೋಧ ಪಕ್ಷದವರೂ ಕೂಡ ವಿರೋಧಿಸುತ್ತಿಲ್ಲ. ಮುಂದೆ ನಮಗೂ ಲಾಭವಾಗುತ್ತದೆಂಬ ಲೆಕ್ಕಾಚಾರ ಪ್ರತಿಪಕ್ಷದಲ್ಲಿ ಅಡಗಿರುವಂತಿದೆ. ಸರ್ಕಾರಗಳು ಅಭಿವೃದ್ಧಿ ಹೆಸರಲ್ಲಿ ನಿರಂತರವಾಗಿ ಪರಿಸರಕ್ಕೆ ಪೆಟ್ಟಾಗುವ ಕೆಲಸವನ್ನೇ ಮಾಡುತ್ತಿವೆ. ಮಾಲಿನ್ಯ ನಿಯಂತ್ರಣ, ಅರಣ್ಯ ಬೆಳೆಸುವ ಯೋಜನೆಗಳಿಗೆ ಒತ್ತು ನೀಡುವುದಿಲ್ಲ. ಏಕೆಂದರೆ ಅದರಿಂದ ಹಣ ಗಳಿಸಲು ಸಾಧ್ಯವಿಲ್ಲ ಎಂದು ದೂರಿದರು.

ಅರುಂದತಿ ನಾಗ್‌ ಮಾತನಾಡಿ, ನಗರಕ್ಕೆ .33 ಸಾವಿರ ಕೋಟಿ ಎಲಿವೇಟೆಡ್‌ ಕಾರಿಡಾರ್‌ ಅಗತ್ಯವಿಲ್ಲ. ಇದರಿಂದ ಇನ್ನಷ್ಟುಪರಿಸರ ನಾಶವಾಗುತ್ತದೆಯೇ ಹೊರತು ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರ ಮೊದಲು ನಿಯಂತ್ರಣವಿಲ್ಲದೆ ಹೆಚ್ಚುತ್ತಿರುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿ. ಎಲ್ಲಾ ಹಣವನ್ನು ಬೆಂಗಳೂರಿಗೆ ಸುರಿಯುವುದು ಬಿಟ್ಟು ಅಭಿವೃದ್ಧಿಯಾಗದ ಗುಲ್ಬರ್ಗಾ, ರಾಯಚೂರಿನಂತಹ ಉತ್ತರ ಕರ್ನಾಟಕ ಭಾಗಗಳ ಅಭಿವೃದ್ಧಿಗೆ ಬಳಸಲಿ ಎಂದು ಸಲಹೆ ನೀಡಿದರು.

ಕಾತ್ಯಾಯಿನಿ ಚಾಮರಾಜ್‌ ಮಾತನಾಡಿ, ನಗರದಲ್ಲಿ 75 ಲಕ್ಷ ವಾಹನಗಳು ಸಂಚರಿಸುತ್ತಿವೆ. ಇದನ್ನು ನಿಯಂತ್ರಣಕ್ಕೆ ತರಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಎಂದರು.

ಪತ್ರ ಚಳುವಳಿ!

ದೊಡ್ಡ ಪ್ರಮಾಣದ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಮಾಡೋಕೆ ಸರ್ಕಾರ ಮುಂದಾಗಿದೆ. ಜನರ ತೆರಿಗೆ ಹಣದಲ್ಲಿ ಯೋಜನೆ ಮಾಡುತ್ತಿರುವ ಸರ್ಕಾರಕ್ಕೆ ಜನರ ಅಭಿಪ್ರಾಯ ಮಾತ್ರ ಬೇಡವಾಗಿದೆ ಎಂದು ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಯೋಜನೆಯನ್ನು ಸ್ಥಗಿತಗೊಳಿಸುವುದಕ್ಕಾಗಿ ಸಂಸ್ಥೆ ಪತ್ರ ಚಳವಳಿ ಪ್ರಾರಂಭಿಸಿದ್ದು, 50 ಸಾವಿರ ಪತ್ರಗಳ ಸಂಗ್ರಹ ಮಾಡಿ ಅವುಗಳನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಿದ್ದಾರೆ.

ಕುಮಾರಸ್ವಾಮಿ ಟ್ವಿಟ್‌

ಎಲಿವೇಟೆಡ್‌ ಕಾರಿಡಾರ್‌ ವಿರೋಧಿಸಿ ನಾಗರಿಕರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬೆಂಗಳೂರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಸಂಚಾರ ದಟ್ಟಣೆಗೆ ಎಲಿವೇಟೆಡ್‌ ಕಾರಿಡಾರ್‌ ಪರಿಹಾರ. ಕೆಲವು ನಾಗರಿಕರು ಈ ಯೋಜನೆ ವಿರೋಧಿಸಿ ಪ್ರತಿಭಟಿಸುತ್ತಿವೆ. ಪ್ರತಿಭಟನಾಕಾರರು ನನ್ನ ಬಳಿ ಬನ್ನಿ, ನಿಮ್ಮ ಆತಂಕವೇನು, ಕಾಳಜಿಯೇನು ಎಂಬುದನ್ನು ತಿಳಿಸಿ, ನಿಮ್ಮ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ.