ಕೆಎಸ್‌ಆರ್‌ಟಿಸಿ ಸೇರಿದಂತೆ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮದ ಎಲ್ಲ ಮಾದರಿ ಬಸ್‌ಗಳಲ್ಲಿ ವೈಫೈ ಸೇವೆ ನೀಡುವ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ವೈಫೈ ಸೇವೆ ನೀಡುವ ದೇಶದ ಮೊದಲ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಬೆಂಗಳೂರು(ಮೇ.21): ಪ್ರಯಾಣಿಕ ಸ್ನೇಹಿಯಾಗುವ ನಿಟ್ಟಿನಲ್ಲಿ ಹಲವು ಸೇವೆಗಳನ್ನು ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ಬಸ್‌ಗಳಲ್ಲಿ ಇನ್ನು ಮುಂದೆ ಉಚಿತ ವೈಫೈ ಸೇವೆ ನೀಡಲಿದೆ.

ಕೆಎಸ್‌ಆರ್‌ಟಿಸಿ ಸೇರಿದಂತೆ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮದ ಎಲ್ಲ ಮಾದರಿ ಬಸ್‌ಗಳಲ್ಲಿ ವೈಫೈ ಸೇವೆ ನೀಡುವ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ವೈಫೈ ಸೇವೆ ನೀಡುವ ದೇಶದ ಮೊದಲ ಏಕೈಕ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನೂತನ ಯೋಜನೆಯಿಂದ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 18 ಸಾವಿರ ಬಸ್‌ಗಳಲ್ಲಿ ವೈಫೈ ಸೇವೆ ದೊರೆಯಲಿದೆ. ಮೂರು ನಿಗಮಗಳ ಬಸ್‌ಗಳಿಗೆ ವೈಫೈ ಸೇವೆ ಒದಗಿಸುವ ಸಂಬಂಧ ಕೆಎಸ್‌ಆರ್‌ಟಿಸಿ ಟೆಂಡರ್ ಕರೆದಿದ್ದು, ಪುಣೆ ಮೂಲದ ಕೆಪಿಐಟಿ ಟೆಕ್ನಾಲಜಿಸ್ ಕಂಪೆನಿ ಟೆಂಡರ್ ಪಡೆದುಕೊಂಡಿದೆ. ವೈಫೈ ಒದಗಿಸುವ ನಿಟ್ಟಿನಲ್ಲಿ ಕಂಪೆನಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿದರೆ ಜೂನ್ ತಿಂಗಳಿಂದ ಮೂರು ನಿಗಮಗಳ ಎಲ್ಲಾ ಮಾದರಿಯ ಬಸ್‌ಗಳಲ್ಲಿ ಪ್ರಯಾಣಿಕರ ಬಳಕೆಗೆ ವೈಫೈ ಲಭ್ಯವಾಗಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದ ಮೂರು ರಸ್ತೆ ಸಾರಿಗೆ ನಿಗಮಗಳಲ್ಲಿ ಹವಾನಿಯಂತ್ರಿತ ಬಸ್‌ಗಳು ಸೇರಿದಂತೆ ಒಟ್ಟು 18 ಸಾವಿರ ಬಸ್‌ಗಳಿವೆ. ಈ ಪೈಕಿ ಕೆಎಸ್‌ಆರ್‌ಟಿಸಿ 8,320 ಬಸ್‌ಗಳು, ವಾಯುವ್ಯ ನಿಗಮದಲ್ಲಿ 6,165 ಹಾಗೂ ಈಶಾನ್ಯ ನಿಗಮದಲ್ಲಿ 5,049 ಬಸ್‌ಗಳಿವೆ. ಮುಂದಿನ ತಿಂಗಳಿಂದ ಈ ಎಲ್ಲಾ ಬಸ್‌ಗಳಲ್ಲಿ ವೈಫೈ ಸೇವೆ ದೊರೆಯಲಿದೆ. 

ಆದಾಯಹೆಚ್ಚಳ

ಜನಸಾಮಾನ್ಯರನ್ನು ಸರ್ಕಾರಿ ಬಸ್‌ಗಳತ್ತ ಸೆಳೆಯುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇಂದು ಬಹುತೇಕರು ಮೊಬೈಲ್ ಬಳಸುತ್ತಿದ್ದು, ವಿವಿಧ ಕಾರಣಗಳಿಗೆ ಇಂಟರ್‌ನೆಟ್ ಬಳಸುತ್ತಿದ್ದಾರೆ. ಪ್ರಯಾಣಿಕರು ಪ್ರಯಾಣದ ವೇಳೆ ಮನರಂಜನೆ, ಸಂಗೀತ, ಕಾರ್ಟೂನ್ ಆಟಗಳಲ್ಲಿ ತೊಡಗುವುದು ಸಾಮಾನ್ಯವಾಗಿದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಉಚಿತ ವೈಫೈ ಯೋಜನೆ ರೂಪಿಸಲಾಗಿದೆ. ಒಬ್ಬ ಪ್ರಯಾಣಿಕ ವೈಫೈ ಮೂಲಕ ಉಚಿತವಾಗಿ 20 ಎಂಬಿಯಷ್ಟು ಇಂಟರ್‌ನೆಟ್ ಬಳಸಲು ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಉಚಿತ ವೈಫೈ ದೊರೆಯುತ್ತದೆ ಎಂದರೆ ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗುತ್ತದೆ. 

ವೈಫೈ ಸೇವೆಗೆ ನಿಗಮಗಳು ಯಾವುದೇ ಬಂಡವಾಳ ಹೂಡುತ್ತಿಲ್ಲ. ವೈಫೈ ಸೇವೆ ನೀಡುತ್ತಿರುವ ಕೆಪಿಐಟಿ ಟೆಕ್ನಾಲಜಿ ಕಂಪನಿಯು ನಿಗಮಗಳಿಗೆ ಮಾಸಿಕ ಹಣ ಭರಿಸಲಿದೆ. ಇದರಿಂದ ನಿಗಮಗಳಿಗೆ ಬಂಡವಾಳ ರಹಿತ ಆದಾಯ ಬರಲಿದೆ. ಅಂದಾಜಿನ ಪ್ರಕಾರ ಮೂರು ನಿಗಮಗಳಿಗೆ ಮಾಸಿಕ ರೂ. 20 ಲಕ್ಷ ಆದಾಯ ಬರಲಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿಗೆ ಮಾಸಿಕ ರೂ .10 ಲಕ್ಷ ಆದಾಯ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

450ಬಸ್ನಿಲ್ದಾಣಗಳಲ್ಲಿವೈಫೈ

ಈಗಾಗಲೇ ರಾಜ್ಯದ 24 ಬಸ್ ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶೀಘ್ರದಲ್ಲೇ ರಾಜ್ಯದ 450 ಬಸ್ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಈ ಸಂಬಂಧ ತಿಂಗಳಾಂತ್ಯಕ್ಕೆ ಟೆಂಡರ್ ಕರೆಯುವ ಸಾಧ್ಯತೆಯಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ವರದಿ: ಮೋಹನ್' ಕುಮಾರ್ ಹಂಡ್ರಂಗಿ

ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಈ ಮೂರು ನಿಗಮಗಳ 18 ಸಾವಿರ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಸಂಬಂಧ ಪುಣೆ ಮೂಲದ ಕಂಪನಿಗೆ ಟೆಂಡರ್ ಆಗಿದೆ. ಈ ಯೋಜನೆಗೆ ನಿಗಮಗಳು ಯಾವುದೇ ಬಂಡವಾಳ ಹಾಕುತ್ತಿಲ್ಲ. ವೈಫೈ ಒದಗಿಸುತ್ತಿರುವ ಕಂಪನಿಯೇ ನಿಗಮಗಳಿಗೆ ಮಾಸಿಕ ಹಣ ನೀಡಲಿದ್ದು, ನಿಗಮಗಳಿಗೆ ಆದಾಯ ಬರಲಿದೆ.

- ಆರ್.ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ