ಪಾಸ್‌ಪೋರ್ಟ್‌ ವಿತರಿಸಲು ಅನುಕೂಲ ಮಾಡಿಕೊಡುವಂತೆ ನಕಲಿ ಶಿಫಾರಸ್ಸು ಪತ್ರ ಸೃಷ್ಟಿಸಿದ್ದ. ನಂತರ ಕೇಂದ್ರ ಸಚಿವ ಪಿ.ಎಸ್‌.ಸತೀಶ್‌ ಚಂದ್ರ ಗುಪ್ತ ಅವರ ಹೆಸರಿನ ಲೆಟರ್‌ಹೆಡ್‌ನಲ್ಲಿ ಅದೇ ಮಾದರಿಯಲ್ಲಿ ಪತ್ರ ಬರೆದು ಪ್ರಾದೇಶಿಕ ಕಚೇರಿಗೆ ಅಂಚೆ ಮೂಲಕ ಕಳುಹಿಸಿ ಪಾಸ್‌ಪೋರ್ಟ್‌ನ ವಿತರಿಸಲು ಮನವಿ ಸಲ್ಲಿಸಿದ್ದ.

ಬೆಂಗಳೂರು(ಏ.23): ಪ್ರಧಾನಿ, ವಿದೇಶಾಂಗ ಸಚಿವರ ಹೆಸರಿನ ನಕಲಿ ಲೆಟರ್‌ಹೆಡ್‌ಗಳನ್ನು ಬಳಸಿ ಪಾಸ್‌ಪೋರ್ಟ್‌ ಪಡೆದು ವಂಚಿಸುತ್ತಿದ್ದ ಇಬ್ಬರು ಸಹೋದರರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. 
ಜೆ.ಎಂ. ಗಾರ್ಡನ್‌ ನಿವಾಸಿಗಳಾದ ಸೂರ್ಯ ರೋಷನ್‌ (21) ಮತ್ತು ಆರ್ಯ ರೋಷನ್‌ (27) ಬಂಧಿತ ಸಹೋದರರು. ಬಂಧಿತರಿಂದ ಕಲರ್‌ ಪ್ರಿಂಟರ್‌ ಹಾಗೂ ಭಾರತ ಸರ್ಕಾರದ ಅಶೋಕ ಸ್ಥಂಭದ ಚಿಹ್ನೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸೂರ್ಯ ರೋಷನ್‌ ದ್ವಿತೀಯ ಪಿಯು ಓದಿದ್ದು, ವೆಬ್‌ಡಿಸೈನಿಂಗ್‌ ಮತ್ತು ಕಂಪ್ಯೂಟರ್‌ ಅಪ್ಲಿಕೇಷನ್‌ ಬಳಕೆ ಬಗ್ಗೆ ವ್ಯಾಸಂಗ ಮಾಡಿದ್ದ. ಆರ್ಯ ರೋಷನ್‌ 10ನೇ ತರಗತಿ ಓದಿದ್ದಾನೆ. ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದ. ಈ ನಡುವೆ ವಿದೇಶದಲ್ಲಿ ಕೆಲಸಕ್ಕೆ ಹೋಗುವ ಸಲು ವಾಗಿ ಸಹೋದರರು 2012ರಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜನನ ಪ್ರಮಾಣ ಪತ್ರ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯಲ್ಲಿ ಹಳೆ ಹೆಸರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್‌ ಕಚೇರಿ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದರು. 
ನಂತರ 2017 ಮಾಚ್‌ರ್‍ನಲ್ಲಿ ಸೂಕ್ತ ದಾಖಲೆಗಳ ಸಮೇತ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ, ಮತ್ತೊಮ್ಮೆ ಅರ್ಜಿ ತಿರಸ್ಕರಿಸುತ್ತಾರೆ ಎಂಬ ಭಯದಿಂದ, ಆರೋಪಿ ಸೂರ್ಯ ರೋಷನ್‌, ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್‌ ಅವರ ಫೋಟೋ, ಸಹಿ ಹೊಂದಿರುವ ಲೆಟರ್‌ ಹೆಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ ಸೂರ್ಯ ಮತ್ತು ಆರ್ಯ ರೋಷನ್‌ ತಮ್ಮ ಕುಟುಂಬಕ್ಕೆ ಆತ್ಮೀಯರು. ಪಾಸ್‌ಪೋರ್ಟ್‌ ವಿತರಿಸಲು ಅನುಕೂಲ ಮಾಡಿಕೊಡುವಂತೆ ನಕಲಿ ಶಿಫಾರಸ್ಸು ಪತ್ರ ಸೃಷ್ಟಿಸಿದ್ದ. ನಂತರ ಕೇಂದ್ರ ಸಚಿವ ಪಿ.ಎಸ್‌.ಸತೀಶ್‌ ಚಂದ್ರ ಗುಪ್ತ ಅವರ ಹೆಸರಿನ ಲೆಟರ್‌ಹೆಡ್‌ನಲ್ಲಿ ಅದೇ ಮಾದರಿಯಲ್ಲಿ ಪತ್ರ ಬರೆದು ಪ್ರಾದೇಶಿಕ ಕಚೇರಿಗೆ ಅಂಚೆ ಮೂಲಕ ಕಳುಹಿಸಿ ಪಾಸ್‌ಪೋರ್ಟ್‌ನ ವಿತರಿಸಲು ಮನವಿ ಸಲ್ಲಿಸಿದ್ದ. ಇದನ್ನು ಪರಿಶೀಲಿಸಿದ ಪಾಸ್‌ಪೋರ್ಟ್‌ ಕಚೇರಿ ಅಧಿಕಾರಗಳು ಖಚಿತ ಪಡಿಸಿಕೊಳ್ಳಲು ಆಯಾ ಇಲಾಖೆಯ ಸಚಿವಾಲಯಕ್ಕೆ ಕಳುಹಿಸಿ ಕೊಟ್ಟಿದ್ದರು. ಆದರೆ, ಅಲ್ಲಿನ ಅಧಿಕಾರಿಗಳು ಇದು ನಕಲಿ ದೃಢಪಡಿಸಿದ್ದರು.

ಕನ್ನಡಪ್ರಭ ವಾರ್ತೆ