* ಜಾರ್ಜ್ ಎಚ್'ಡಬ್ಲ್ಯೂ ಬುಷ್ ವಿರುದ್ಧ ನಾಲ್ಕನೇ ಮಹಿಳೆಯಿಂದ ಲೈಂಗಿಕ ಕಿರುಕುಳದ ದೂರು* 2006ರಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಬುಷ್ ನನ್ನ ಕುಂಡಿ ಹಿಸುಕಿದರು: ಅಮಂಡಾ ಆರೋಪ* ತನ್ನ ಇನ್ಸ್'ಟಾಗ್ರಾಂನಲ್ಲಿ ಫೋಟೋ ಹಾಕಿ ದೂರು ಬರೆದ ಅಮಂಡಾ ಸ್ಟೇಪಲ್ಸ್* 2012ರಿಂದ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಗಾಲಿಕುರ್ಚಿಯಲ್ಲಿ ನಡೆದಾಡುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ

ವಾಷಿಂಗ್ಟನ್(ಅ. 28): ಅಮೆರಿಕದ ಮಾಜಿ ಅಧ್ಯಕ್ಷ 93 ವರ್ಷದ ವಯೋವೃದ್ಧ ಜಾರ್ಜ್ ಬುಷ್ ಸೀನಿಯರ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ಸರಮಾಲೆಯೇ ಸೃಷ್ಟಿಯಾಗುತ್ತಿದೆ. ಬುಷ್ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರೆಂದು ಅಮಂಡಾ ಸ್ಟೇಪಲ್ಸ್ ಎಂಬ ಮಹಿಳೆ ಇದೀಗ ಆರೋಪಿಸಿದ್ದಾಳೆ. ಬುಷ್ ವಿರುದ್ಧ ಆಪಾದನೆ ಮಾಡಿರುವ ನಾಲ್ಕನೇ ಮಹಿಳೆ ಇವಳಾಗಿದ್ದಾಳೆ. ಫೋಟೋಗೆ ಪೋಸು ಕೊಡುವ ವೇಳೆ ಬುಷ್ ನನ್ನ ಪೃಷ್ಠ ಅಮುಕಿದರು ಎಂದು ಈ ನಾರಿಮಣಿ ಇನ್ಸ್'ಟಾಗ್ರಾಮ್'ನಲ್ಲಿ ಫೋಟೋ ಹಾಕಿಕೊಂಡು ದೂರಿದ್ದಾಳೆ.

ಏನು ಹೇಳುತ್ತಾಳೆ ಅಮಂಡಾ?
2006ರಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿರುವ ವೇಳೆ ಜಾರ್ಜ್ ಬುಷ್ ಜೊತೆ ಫೋಟೋ ತೆಗೆಸಿಕೊಂಡಿರುತ್ತಾಳೆ. "ಆ ಸಂದರ್ಭದಲ್ಲಿ ಬುಷ್ ನನ್ನ ಕುಂಡಿಯನ್ನು ಹಿಡಿದು 'ಓಹ್, ನಾನು ಆ ಅಧ್ಯಕ್ಷನಲ್ಲ' ಎಂದು ಹಾಸ್ಯ ಮಾಡಿದರು," ಎಂದು ಈ ಮಹಿಳೆ ಬರೆದುಕೊಂಡಿದ್ದಾಳೆ.

"ಅಧ್ಯಕ್ಷರು ತಮ್ಮ ವೃದ್ಧಾಪ್ಯದಲ್ಲಿ ಕೆಟ್ಟುಹೋಗಿರಬೇಕೆಂದು ನಾನು ನನ್ನನ್ನು ಸಮಾಧಾನ ಮಾಡಿಕೊಂಡೆ. ಬುಷ್ ಎಸ್ಟೇಟ್'ನಿಂದ ಹೊರಬಂದ ಬಳಿಕ ನನ್ನ ಅಪ್ಪನಿಗೆ ವಿಷಯ ತಿಳಿಸಿದೆ. ಅವರಿಗೆ ಇದು ತಮಾಷೆಯಂತೆ ಅನಿಸಲಿಲ್ಲ. ಈ ಬಗ್ಗೆ ನಾನು ಗಾಢವಾಗಿ ಚಿಂತಿಸಿದೆ. ನನಗೇನಾದರೂ ಮಗಳಿದ್ದು, ಆಕೆಗೆ ಅಧ್ಯಕ್ಷರು ಹೀಗೆ ಮಾಡಿದರೆ ಸುಮ್ಮನಿರು ಎಂದು ನಾನು ಖಂಡಿತ ಹೇಳಲಾರೆ. ಫೋಟೋ ತೆಗೆಸಿಕೊಳ್ಳುವಾಗ ಅಧ್ಯಕ್ಷರು ಇನ್ನೂ ಎಷ್ಟು ಮಹಿಳೆಯರ ಕುಂಡಿಯನ್ನು ಹಿಡಿದುಕೊಂಡಿದ್ದಿರಬಹುದು..! ಈ ಘಟನೆ ನನಗೆ ದೊಡ್ಡ ಹಾನಿಯನ್ನೇನೂ ಮಾಡದಿದ್ದರೂ ಅಧಿಕಾರದ ದುರುಪಯೋಗದ ಬಗ್ಗೆ ನಾನು ಯೋಚಿಸುವಂತೆ ಮಾಡಿದೆ." ಎಂದು ತನ್ನ ಇನ್ಸ್'ಟಾಗ್ರಾಮ್ ಪೋಸ್ಟ್'ನಲ್ಲಿ ಅಮಂಡಾ ವಿವರಿಸಿದ್ದಾಳೆ.

1989-1993ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್.ಡಬ್ಲ್ಯೂ.ಬುಷ್ ಅವರು 2000 ವರ್ಷದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿರಳಾತಿವಿರಳವಾಗಿ ಬರುವ ವ್ಯಾಸ್ಕುಲಾರ್ ಪಾರ್ಕಿನ್ಸನ್ ಖಾಹಿಲೆಗೆ ತುತ್ತಾಗಿರುವ ಜಾರ್ಜ್ ಬುಷ್ ಅವರು 2012ರಿಂದ ಗಾಲಿಕುರ್ಚಿಯಲ್ಲೇ ನಡೆದಾಡುತ್ತಿದ್ದಾರೆ. ಮಿದುಳು, ಕೈಕಾಲು, ತಲೆ ಸೇರಿದಂತೆ ಅವರ ಅನೇಕ ಅಂಗಗಳು ಸ್ವಾಧೀನದಲ್ಲಿಲ್ಲ.

ಇದೇ ವೇಳೆ, ಮಹಿಳೆಯರ ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟಿರುವುದು ನಿಜ ಎಂದು ಬುಷ್ ಕಚೇರಿಯವರು ಒಪ್ಪಿಕೊಂಡಿದ್ದಾರೆ. ಆದರೆ, ತನ್ನ ಪಕ್ಕದಲ್ಲಿ ನಿಂತವರ ಸೊಂಟದಿಂದ ಕೆಳಗಿನ ಭಾಗಗಳಿಗೆ ಆಸರೆಗಾಗಿ ಬುಷ್ ಕೈಹಾಕಿದ್ದಾರೆ ಹೊರತು ವಿಕೃತ ಉದ್ದೇಶದಿಂದಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಬುಷ್ ಅವರ ನಡವಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಅತೀವ ಕ್ಷಮೆ ಯಾಚಿಸಿದ್ದಾರೆ ಎಂದು ಬುಷ್ ಟೀಮ್ ಹೇಳಿದೆ.

ಜಾರ್ಜ್ ಬುಷ್ ಸೀನಿಯರ್ ಅವರಿಗೆ 93 ವರ್ಷವಾಗಿದ್ದು, ಅತ್ಯಂತ ಹಿರಿಯ ಜೀವಂತ ಅಮೆರಿಕ ಅಧ್ಯಕ್ಷರೆನಿಸಿದ್ದಾರೆ. ಇವರ ನಂತರ ಬಿಲ್ ಕ್ಲಿಂಟನ್ ಅಧ್ಯಕ್ಷ ಪಟ್ಟ ಅಲಂಕರಿಸಿದ್ದರು. ಕ್ಲಿಂಟನ್ ಬಳಿಕ ಜಾರ್ಜ್ ಬುಷ್ ಅವರ ಮಗ ಜಾರ್ಜ್ ಬುಷ್ ಜೂನಿಯರ್ ಅಮೆರಿಕದ ಅಧ್ಯಕ್ಷರಾಗುತ್ತಾರೆ.