ತನ್ನ ಸಹಚರರೊಂದಿಗೆ ಮೇಘನಾ ಮನೆಗೆ ನುಗ್ಗಿದ ಹರೀಶ್'ರ ಸಹೋದರನು, ಮನೆಯಲ್ಲಿರುವ ವಸ್ತುಗಳೆಲ್ಲಾ ಅಣ್ಣ ಹರೀಶನಿಗೆ ಸೇರಿದ್ದವು ಎಂದು ಹೇಳುತ್ತಾನೆ.
ಬೆಂಗಳೂರು(ನ. 04): ಕಿರುತೆರೆ ನಟಿ ಮೇಘನಾ ಅವರ ಮನೆಗೆ ನುಗ್ಗಿ ನಾಲ್ವರು ವ್ಯಕ್ತಿಗಳು ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆ ನಡೆಸಿದವರ ಪೈಕಿ ಒಬ್ಬಾತ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ನಟ ಹರೀಶ್ ಅವರ ಸಹೋದರನೆನ್ನಲಾಗಿದೆ. ಆತ ಮೇಘನಾಗೆ ಕೊಲೆ ಬೆದರಿಕೆಯನ್ನೂ ಹಾಕಿದ ಆರೋಪವಿದೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದವರನ್ನು ದರ್ಶನ್, ಪೃಥ್ವಿ, ವಿನೂತನ್ ಹಾಗೂ ನವೀನ್ ಎಂದು ಹೇಳಲಾಗುತ್ತಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನು ಈ ಘಟನೆ?
'ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗುವ ಅರಗಿಣಿ ಧಾರಾವಾಹಿಯ ನಟಿ ಮೇಘನಾ ಹಾಗೂ ಮೃತ ಹರೀಶ್ ನಡುವೆ ಈ ಹಿಂದೆ ಲಿವಿಂಗ್'ಟುಗೆದರ್ ಸಂಬಂಧವಿತ್ತು. ಅವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯೂ ಆಗಲಿದ್ದಾರೆಂಬ ಸುದ್ದಿಯೂ ಇತ್ತು. ಕಿರುತೆರೆ ನಟನಾಗಿದ್ದ ಹರೀಶ್ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ಇದೀಗ, ತನ್ನ ಸಹಚರರೊಂದಿಗೆ ಮೇಘನಾ ಮನೆಗೆ ನುಗ್ಗಿದ ಹರೀಶ್'ರ ಸಹೋದರನು, ಮನೆಯಲ್ಲಿರುವ ವಸ್ತುಗಳೆಲ್ಲಾ ಅಣ್ಣ ಹರೀಶನಿಗೆ ಸೇರಿದ್ದವು ಎಂದು ಹೇಳುತ್ತಾನೆ. ಈ ವೇಳೆ ಮೇಘನಾ ಹಾಗೂ ಆ ನಾಲ್ವರ ನಡುವೆ ವಾಗ್ವಾದ ನಡೆಯುತ್ತದೆ. ಮೇಘನಾ ಮೇಲೆ ಹರೀಶ್ ತಮ್ಮನಿಂದ ಹಲ್ಲೆಯಾಗುತ್ತದೆ. ಮನೆಯಲ್ಲಿದ್ದ ಪೀಠೋಪರಣಗಳನ್ನು ಆ ನಾಲ್ವರು ಹೊತ್ತೊಯ್ದರೆನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
