‘ಸಮಾಜವಾದಿ’ ಮುಖಂಡನಿಂದ RSSಗೆ ಕೋಟಿ ಕೋಟಿ ದಾನ: ಸಂಘಟನೆಯ ಗುಣಗಾನ!
ದೇಶದ ಗಮನ ಸೆಳೆದ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ನಡೆ! ಆರ್‌ಎಸ್‌ಎಸ್ ಸಹ ಸಂಘಟನೆಗೆ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ದಾನ ಮಾಡಿದ ಅಮರ್ ಸಿಂಗ್! ಸೇವಾ ಭಾರತಿ ಸಂಘಟನೆಗೆ ಪೂರ್ವಿಕರ 15 ಕೋಟಿ ರೂ. ಆಸ್ತಿ ದೇಣಿಗೆ! ಸಂಚಲನ ಮೂಡಿಸಿದ ಆರ್‌ಎಸ್‌ಎಸ್‌ಗೆ ಅಮರ್ ಸಿಂಗ್ ಆಸ್ತಿ ದಾನ! ಅಮರ್ ಸಿಂಗ್ ನಡೆಗೆ ಪ್ರತಿಪಕ್ಷಗಳ ತೀವ್ರ ಆಕ್ರೋಶ! ಬಿಜೆಪಿ ಸೇರುವ ಯೋಜನೆಯಲ್ಲಿದ್ದಾರಂತೆ ಅಮರ್ ಸಿಂಗ್
ಲಕ್ನೋ(ನ.29): ವಿಚಿತ್ರ ಸನ್ನಿವೇಶವೊಂದರಲ್ಲಿ ಸಮಾಜವಾದಿ ಪಕ್ಷದ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಮರ್ ಸಿಂಗ್, ತಮ್ಮ ಪೂರ್ವಿಕರಿಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಆರ್‌ಎಸ್‌ಎಸ್ ಸಹ ಸಂಘಟನೆಗೆ ದೇಣಿಗೆ ನೀಡಿದ್ದಾರೆ.
ಹೌದು, ಅಮರ್ ಸಿಂಗ್ ಆಜಮ್ ಗಡ್ ಜಿಲ್ಲೆಯಲ್ಲಿರುವ ಸುಮಾರು 15 ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಆಸ್ತಿಯನ್ನು ಆರ್‌ಎಸ್‌ಎಸ್ ಸಹ ಸಂಘಟನೆ ಸೇವಾ ಭಾರತಿಗೆ ದಾನ ನೀಡಿದ್ದಾರೆ.
ಅಮರ್ ಸಿಂಗ್ ಸುಮಾರು 4 ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಮನೆ, 10 ಕೋಟಿ ಬೆಲೆ ಬಾಳುವ ಜಮೀನನ್ನು ಸೇವಾ ಭಾರತಿ ಹೆಸರಿಗೆ ಬರೆದುಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮರ್ ಸಿಂಗ್, ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಘಟನೆಗಳಿಗೆ ಬೆಂಬಲವಾಗಿ ತಾವು ಸಣ್ಣ ಸಹಾಯ ಮಾಡಿರುವುದಾಗಿ ಹೇಳಿದ್ದಾರೆ.
ಇನ್ನು ಅಮರ್ ಸಿಂಗ್ ನಡೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಅಮರ್ ಸಿಂಗ್ ಬಿಜೆಪಿ ಪಕ್ಷ ಸೇರುವ ಪ್ರಯತ್ನದಲ್ಲಿದ್ದು, ಕೇಸರಿಪಡೆಯನ್ನು ಒಲಿಸಿಕೊಳ್ಳಲು ಆಸ್ತಿ ದಾನ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದಿವೆ.