ಕೋಲ್ಕತ್ತಾ (ಆ. 13): ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇಂದು ಬೆಳಿಗ್ಗೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. 

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸೋಮನಾಥ್ ಚಟರ್ಜಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಟರ್ಜಿಯವರನ್ನು ಜೂ. 28 ರಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗಸ್ಟ್ 5 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಮತ್ತೆ ಕಿಡ್ನಿ ಡಯಾಲಿಸಿಸ್ಸ್‌ಗೆಂದು ಆ. 9 ಕ್ಕೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. 

ಸೋಮನಾಥ್ ಚಟರ್ಜಿಯವರು 1971 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. 1977 ರಲ್ಲಿ ಮತ್ತೆ ಸ್ಪರ್ಧಿಸಿ ಗೆದ್ದರು. 1984 ರಲ್ಲಿ ಮಮತಾ ಬ್ಯಾನರ್ಜಿ ಎದುರು ಸೋತರು. 

ಯುಪಿಎ ಸರ್ಕಾರವಿದ್ದಾಗ 2004-2009 ರವರೆಗೆ ಸೋಮನಾಥ್ ಚಟರ್ಜಿ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 

ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.