ಕೈರೋ[ಜೂ.18]: ಈಜಿಪ್ಟ್‌ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ಮೂಲಕ ದೇಶದ ಅಧ್ಯಕ್ಷರಾಗಿ ಹೊರಹೊಮ್ಮಿದ್ದ ಮುಸ್ಲಿಂ ಬ್ರದರ್‌ಹುಡ್‌ ನಾಯಕ ಮೊಹಮ್ಮದ್‌ ಮೋರ್ಸಿ ಅವರು ವಿಚಾರಣೆ ವೇಳೆಯೇ ಕೋರ್ಟ್‌ನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಸೋಮವಾರದ ಕೋರ್ಟ್‌ ವಿಚಾರಣೆ ವೇಳೆ ಗಾಜಿನ ಪಂಜರದಿಂದಲೇ ವಿಚಾರಣೆ ಎದುರಿಸಿದ ಮೋರ್ಸಿ(67) ತಮ್ಮ ಬಳಿ ಹಲವು ರಹಸ್ಯಗಳಿದ್ದು, ಅವುಗಳನ್ನು ಬಯಲು ಮಾಡುವುದಾಗಿ ಗುಡುಗಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಅವರು ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೋರ್ಸಿ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರಲ್ಲಿ ಈಜಿಪ್ಟ್‌ನಲ್ಲಿ ಅರಬ್‌ ಸ್ಟ್ರಿಂಗ್ಸ್‌ ಆಂದೋಲನದ ಪರಿಣಾಮವಾಗಿ ದೇಶದಲ್ಲಿ ನಡೆದ ಭಾರೀ ರಕ್ತಪಾತದಿಂದ ಅಧ್ಯಕ್ಷ ಹೋಸ್ನಿ ಮುಬಾರಕ್‌ ಅವರನ್ನು ಅಧಿಕಾರದಿಂದ ಕೆಳಗಿಳಿದರು. ಆ ಬಳಿಕ 2012ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ನಿರ್ಭೀತ ಚುನಾವಣೆಗಳು ನಡೆದು, ಮೊಹಮ್ಮದ್‌ ಮೋರ್ಸಿ ಅವರು ಈಜಿಪ್ಟ್‌ ಅಧ್ಯಕ್ಷರಾಗಿದ್ದರು. ಆದರೆ, ಇದಾಗಿ ಒಂದು ವರ್ಷದಲ್ಲೇ ಅವರನ್ನು ಈಜಿಪ್ಟ್‌ ಸೇನೆ ಅಧಿಕಾರದಿಂದ ಕೆಳಗಿಳಿಸಿತು. ಅಂದಿನಿಂದಲೂ ಮೋರ್ಸಿ ವಿರುದ್ಧ ಹಲವು ಪ್ರಕರಣಗಳನ್ನು ಹೊರಿಸಿ, ಬಂಧನದಲ್ಲಿಡಲಾಗಿತ್ತು.