ಬೆಂಗಳೂರು[ಜು.28]: ಕಾಂಗ್ರೆಸ್ ಹಾಗೂ ಜೆಡಿಎಸ್ ನ ಎಲ್ಲಾ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದು, ಇದು ಬಂಡಾಯವೆದ್ದಿದ್ದ ಶಾಶಕರಿಗೆ ನುಂಗಲಾರದ ತುತ್ತಾಗಿದೆ. ಸ್ಪೀಕರ್ ನಡೆಯನ್ನು ಖಂಡಿಸಿರುವ ಅತೃಪ್ತ ಶಾಸಕರು ತಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಸ್ಪೀಕರ್ ತೀರ್ಪನ್ನು ಸ್ವಾಗತಿಸಿದ್ದಾರೆ.

ಅತೃಪ್ತ ಶಾಸಕರು ಅನರ್ಹ: ಬದಲಾಯ್ತು ನಂಬರ್ ಗೇಮ್!

ಹೌದು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ' ಎಂದಿದ್ದಾರೆ.

ರಾಜೀನಾಮೆ ನೀಡಿದ 14 ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರ

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ 'ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ‌ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ' ಎಂದು ಸ್ಪೀಕರ್ ನಡೆಯನ್ನು ಶ್ಲಾಘಿಸಿದ್ದಾರೆ.

ಅತೃಪ್ತ ಶಾಸಕರು ಅನರ್ಹ: ಸ್ಪೀಕರ್ ನಿರ್ಧಾರಕ್ಕೆ ವಿಶ್ವನಾಥ್ ಫುಲ್ ಗರಂ!

ಅತ್ತ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದಲೂ ಟ್ವೀಟ್ ಮಾಡಲಾಗಿದ್ದು, 'ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ.ಮೈತ್ರಿ ಸರ್ಕಾರವನ್ನು ಉರುಳಿಸಬೇಕೆಂದೇ ಬಿಜೆಪಿಯೊಂದಿಗೆ ಕೈ ಜೋಡಿಸಿ ತಮ್ಮ ಪಕ್ಷಗಳಿಗೆ, ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದ ಈ ಶಾಸಕರುಗಳಿಗೆ ಜನತಾ ನ್ಯಾಯಾಲಯ ಕೂಡ ತಕ್ಕ ಶಿಕ್ಷೆಯನ್ನು ವಿಧಿಸಲಿದೆ' ಎನ್ನುವ ಮೂಲಕ ಅನರ್ಹ ಶಾಸಕರಿಗೆ ಛೀಮಾರಿ ಹಾಕಿದೆ.

ಇನ್ನುಳಿದಂತೆ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಕೂಡಾ ಟ್ವೀಟ್ ಮಾಡಿದ್ದು ಸ್ಪೀಕರ್ ರಮೇಶ್ ಕುಮಾರ್ ತೀರ್ಪನ್ನು ಸ್ವಾಗತಿಸಿದ್ದಾರೆ.