Asianet Suvarna News Asianet Suvarna News

ಸರ್ಕಾರಿ ಪ್ರಾಂಶುಪಾಲರಿಗೆ ಫಾರಿನ್‌ ಯೋಗ

ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರಿ ಶಾಲೆಯ ಪ್ರಾಂಶುಪಾಳರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. 

foreign tour for govt high school principals
Author
Bengaluru, First Published Sep 6, 2018, 9:50 AM IST

ಬೆಂಗಳೂರು :  ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಂಶುಪಾಲರನ್ನು ವಿದೇಶಕ್ಕೆ ಕಳುಹಿಸಿ ಅಧ್ಯಯನ ಮಾಡಿಸಲು ಹಾಗೂ ಶಿಕ್ಷಕರಿಗೆ ತಿಂಗಳಿಗೆ ಒಂದು ದಿನ ತರಬೇತಿ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಡವರು ಮತ್ತು ಉಳ್ಳವರ ಮಕ್ಕಳು ಪಡೆಯುತ್ತಿರುವ ಶಿಕ್ಷಣದಲ್ಲಿ ಅಸಮಾನತೆ ಇದೆ. ಇಂತಹ ಅಸಮಾನತೆ ದೂರ ಮಾಡಲು ಸರ್ಕಾರ ಸಕಾರಾತ್ಮಕವಾದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲು ಹೊರಟಿದೆ. ಅದಕ್ಕಾಗಿ ಸರ್ಕಾರ ಈ ವರ್ಷ ಸರ್ಕಾರಿ ಶಾಲೆ-ಕಾಲೇಜುಗಳ ದುರಸ್ತಿ, ಹೊಸ ಕೊಠಡಿ ನಿರ್ಮಿಸಲು ಒಂದು ಸಾವಿರ ಕೋಟಿ ರು. ಮಂಜೂರು ಮಾಡಿದೆ. ಜೊತೆಗೆ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟಹೆಚ್ಚಿಸಲು ಅನುಸರಿಸಿರುವ ಕ್ರಮದ ಬಗ್ಗೆ ಅಧ್ಯಯನ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಿಕ್ಷಣದ ಗುಣಮಟ್ಟಹೆಚ್ಚಿಸಲು ವಿಶೇಷವಾಗಿ ಪ್ರಾಂಶುಪಾಲರನ್ನು ಅಧ್ಯಯನಕ್ಕೆ ವಿದೇಶಕ್ಕೆ ಕಳುಹಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಶಿಕ್ಷಕರು ಇನ್ನೂ ಉತ್ತಮ ರೀತಿಯಲ್ಲಿ ಕಲಿಸಬೇಕು ಎಂಬ ಉದ್ದೇಶದಿಂದ ಅವರಿಗೆ ತಿಂಗಳಿಗೆ ಒಂದು ದಿನ ತಜ್ಞರಿಂದ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್‌ ಭಾಷೆ ಅನಿವಾರ್ಯವಾಗಿದೆ. ಹೀಗಾಗಿ ಕಳೆದ ಬಜೆಟ್‌ನಲ್ಲಿ ಪ್ರಾಯೋಗಿಕವಾಗಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸುವ ಕಾರ್ಯಕ್ರಮ ಘೋಷಿಸಲಾಗಿತ್ತು. ಅದರಂತೆ ಈ ಶಾಲೆಗಳಿಗೆ ಒಂದು ಸಾವಿರ ಇಂಗ್ಲಿಷ್‌ ಕಲಿಸುವ ಶಿಕ್ಷಕರನ್ನು ಸಹ ನೇಮಕ ಮಾಡಲಾಗುವುದು. ನಾನಾ ಕಾರಣಗಳಿಂದ ಸುಮಾರು 10 ಸಾವಿರ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ವಾಪಸು ಕರೆತಂದು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ, ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಶಾಲೆಗಳ ಗುಣಮಟ್ಟಹೆಚ್ಚಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಮಯ ಕೊಡಿ:

ರಾಜ್ಯದ ಒಟ್ಟು ಬಜೆಟ್‌ ಗಾತ್ರದಲ್ಲಿ ಶೇ.12ರಷ್ಟುಹಣವನ್ನು ಶಿಕ್ಷಣ ಇಲಾಖೆಗೆ ನೀಡಿದ್ದರೂ, ಶಿಕ್ಷಕರ ಸಮಸ್ಯೆ ಸಾಕಷ್ಟುಇದೆ. ಅರೆಕಾಲಿಕ ಶಿಕ್ಷಕರು, ಗುತ್ತಿಗೆ ಶಿಕ್ಷಕರು, ಅತಿಥಿ ಉಪನ್ಯಾಸಕರ ಸಮಸ್ಯೆ ಇದೆ. ಇವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಹೀಗಾಗಿ ಶಿಕ್ಷಕರ ಸಮಸ್ಯೆ ಬಗೆ ಹರಿಸಲು ಸಮಯ ಕೊಡಿ, ತಮ್ಮ ಮೇಲೆ ಶಿಕ್ಷಕರು ಇಟ್ಟಿರುವ ಭರವಸೆ, ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಯೋಜನೆ ಜಾರಿಗೆ ತೊಂದರೆ ಇಲ್ಲ:

ಚುನಾವಣೆಯಲ್ಲಿ ಕೊಟ್ಟಮಾತಿನಂತೆ ರೈತರು ಸಹಕಾರಿ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ್ದ 45 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಸರ್ಕಾರಿ ನೌಕರರ ವೇತನ ಹೆಚ್ಚಳದಿಂದ 16 ಸಾವಿರ ಕೋಟಿ ಸರ್ಕಾರ ನೀಡಬೇಕಿದೆ. ಆದರೆ ಮಾಧ್ಯಮಗಳು ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ತಪ್ಪಾಗಿ ತಿಳಿಸುತ್ತಿವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ರಾಜ್ಯದ ಸಂಪನ್ಮೂಲ ಚೆನ್ನಾಗಿ ಇದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಆದಾಯ ಸಂಗ್ರಹ ಶೇ. 32ರಷ್ಟುಹೆಚ್ಚಿದೆ. ಸರ್ಕಾರದ ಯಾವುದೇ ಯೋಜನೆಗೆ ತೊಂದರೆ ಆಗುವುದಿಲ್ಲ. ಆರ್ಥಿಕ ಶಿಸ್ತಿನ್ನು ಉಲ್ಲಂಘನೆ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಮಾತನಾಡಿ, ಶಿಕ್ಷಕರ ವರ್ಗಾವಣೆ ಮಾಡಲಾಗುವುದು, ಆದರೆ ಮೊದಲು ಕೋರಿಕೆ ಶಿಕ್ಷಕರ ವರ್ಗಾವಣೆ ನಂತರ ಉಳಿದವರನ್ನು ವರ್ಗಾವಣೆ ಮಾಡಲಾಗುವುದು, ಕೋರಿಕೆ ವರ್ಗಾವಣೆಗೆ ಮಾನವೀಯ ಮುಖ ಇರುವುದರಿಂದ ಕಾನೂನು ಸಡಿಲಿಸಿ ಶೇ.10ರಷ್ಟುಹೆಚ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು, ಶಿಕ್ಷಕರ ಸಮಸೆ ಬಗೆಹರಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳ ಫಲಿತಾಂಶ ಶೇ.100 ರಷ್ಟುಬರಲು ಶಿಕ್ಷಕರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ‘ನಯಿ ತಾಲೀಮ ಗಾಂಧೀಜಿ ಆನ್‌ ಎಜುಕೇಶನ್‌’ ಪುಸ್ತಕ ಬಿಡುಗಡೆ ಮಾಡಿದರಲ್ಲದೇ 31 ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು. ಜೊತೆಗೆ ಶಿಕ್ಷಣ ಫೌಂಡೇಶನ್‌ ಮತ್ತು ಡೆಲ್‌ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ನೀಡಿದ 57 ಲ್ಯಾಪ್‌ಟಾಪ್‌ಗಳನ್ನು ಶಿಕ್ಷಣ ಸಚಿವರಿಗೆ ಹಸ್ತಾಂತರ ಮಾಡಲಾಯಿತು.

ಶಾಸಕ ಆರ್‌.ರೋಷನ್‌ ಬೇಗ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ದೇವೇಗೌಡ, ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷ ಎನ್‌. ಮುನಿರಾಜು, ಸ್ಥಾಯಿ

ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಬೆಂಗಳೂರು ನಗರ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅರ್ಚನಾ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ, ಡೆಲ್‌ ಸಂಸ್ಥೆಯ ರುದ್ರಮುನಿ ಮುಂತಾದವರು ಉಪಸ್ಥಿತರಿದ್ದರು.

ಇಂಗ್ಲಿಷ್‌ ಶಾಲೆಯಲ್ಲಿ ಕನ್ನಡ ಕಾವಲುಗಾರರ ಮಕ್ಕಳು!

ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಕಲಿಸುವ ಬಗ್ಗೆ ಕೆಲವು ‘ಕನ್ನಡ ಕಾವಲುಗಾರರು’ ತಮ್ಮ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಅವರ ಮಕ್ಕಳು ಇಂಗ್ಲಿಷ್‌ ಶಾಲೆಯಲ್ಲಿ ಓದುತ್ತಿದ್ದಾರೆ. ಅವರ ಮಕ್ಕಳು ಮಾತ್ರ ಇಂಗ್ಲಿಷ್‌ ಶಾಲೆಯಲ್ಲಿ ಓದಬೇಕು. ಬಡವರು, ಕೂಲಿ ಮಾಡುವವರ ಮಕ್ಕಳು ಏನು ಪಾಪ ಮಾಡಿದ್ದಾರೆ. ಇವರ ಮಕ್ಕಳು ಇಂಗ್ಲಿಷ್‌ ಕಲಿಯಬಾರದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.

ಕನ್ನಡ ಉಳಿಸಿ, ಬೆಳೆಸುವ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ, ಬಡವರು ಮತ್ತು ಉಳ್ಳವರಿಗೂ ಒಂದೇ ರೀತಿಯ ಶಿಕ್ಷಣ ನೀಡದಿದ್ದರೆ ನ್ಯಾಯ ಕೊಡಲು ಹೇಗೆ ಸಾಧ್ಯ, ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ನೀಡಲಾಗುವುದು ಎಂದರು.

Follow Us:
Download App:
  • android
  • ios