ಬೆಂಗಳೂರು (ಆ. 14):  ಕಳೆದೊಂದು ವಾರದಿಂದ ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯು ಎಲ್ಲೆಡೆ ಇಳಿಮುಖವಾಗಿದೆ. ಪರಿಣಾಮ ಬಹುತೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಹಬದಿಗೆ ಬಂದಿದ್ದು ಜನಜೀವನ ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮುಖಮಾಡುತ್ತಿದೆ.

ಸೂತಕದ ಮನೆಯಾದ ಮಂಡಗದ್ದೆ ‘ಹೆರಿಗೆ ಮನೆ’!

ಇದೇ ವೇಳೆ ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿರುವುದರಿಂದ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಯ ಪ್ರವಾಹ ಮಟ್ಟದಲ್ಲಿ 3 ಅಡಿಯಷ್ಟುಇಳಿಕೆ ಕಂಡಿದೆ. ರಕ್ಷಣಾ ಕಾರ್ಯವನ್ನೂ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಸಿಬ್ಬಂದಿ ತಮ್ಮ ತಮ್ಮ ಶಿಬಿರಗಳಿಗೆ ಮರಳಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರದಲ್ಲಿ ಮಾತ್ರ ಭೂ ಕುಸಿತದಿಂದ ಕಣ್ಮರೆಯಾಗಿರುವ ಏಳು ಮಂದಿಗಾಗಿ ರಕ್ಷಣಾ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಈ ನಡುವೆ ಮೋಡ ಸರಿದು ಬಿಸಿಲು ಇಣುಕುತ್ತಿರುವುದರಿಂದ ನೆರೆ ಸಂತ್ರಸ್ತರೂ ಪರಿಹಾರ ಕೇಂದ್ರಗಳಿಂದ ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ತುಂಗಭದ್ರ ಜಲಾಶಯ ಒಡೆದಿದೆ ಎಂಬ ವದಂತಿ: ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು!

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೃಷ್ಣಾ ನದಿಯ ಪ್ರವಾಹ ಇಳಿಮುಖವಾಗಿರುವುದರಿಂದ ಮುಳುಗಡೆಯಾಗಿದ್ದ ಗ್ರಾಮಗಳ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಮಹಾರಾಷ್ಟ್ರದ ಕೊಯ್ನಾ, ವಾರಣಾ, ಕನ್ಹೇರಿ, ಉಮೋದಿ, ತೇರಣಿ, ರಾಧಾನಗರಿ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2.88 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಕೇವಲ ಎರಡು ದಿನಗಳಲ್ಲಿ 1.19 ಲಕ್ಷ ಕ್ಯುಸೆಕ್‌ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಮಟ್ಟವೂ ಕಡಿಮೆಯಾಗಿದೆ.

ಇದೆ ವೇಳೆ ಕೆಳ ಸೇತುವೆಗಳು ಇನ್ನೂ ಜಲಾವೃತಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿಲ್ಲ. ಆದರೆ, ಮಹಾರಾಷ್ಟ್ರ ಹಾಗೂ ಗೋವಾ ಸಂಪರ್ಕ ಮಾರ್ಗಗಳು ತೆರೆದುಕೊಂಡಿವೆ. ಮುಂದಿನ ಎರಡ್ಮೂರು ದಿನಗಳವರೆಗೆ ಇದೆ ರೀತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾದಲ್ಲಿ ಮಾತ್ರ ಪ್ರವಾಹ ಪ್ರಮಾಣ ತಹಬದಿಗೆ ಬರುವ ಸಾಧ್ಯತೆ ಇದೆ. ಇನ್ನು ಭೀಮಾ ನದಿಯಲ್ಲೂ ಪ್ರವಾಹ ಇಳಿಮುಖವಾಗಿರುವುದರಿಂದ ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ.

ಕಾಲೋನಿಗೆ ನೀರು:

ಇದೇವೇಳೆ ಕಳೆದೆರಡು ದಿನದಿಂದ ಅಬ್ಬರಿಸುತ್ತಿದ್ದ ತುಂಗಭದ್ರೆಯೂ ಶಾಂತಳಾಗಿದ್ದು, ಗದಗ ಹಾವೇರಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಸಜವಾಗಿದೆ. ಹಂಪಿಯಲ್ಲಿ ಮುಳುಗಿದ್ದ ಸ್ಮಾರಕಗಳಲ್ಲೂ ನೀರು ಇಳಿಮುಖವಾಗಿದೆ. ಆದರೆ ಕೊಪ್ಪಳದಲ್ಲಿ ತುಂಗಭದ್ರಾ ಅಣೆಕಟ್ಟಿನ ಎಡ ದಂಡೆ ಕಾಲುವೆಯ ಮೇಲ್ಮಟ್ಟದ ಕಾಲುವೆಯ ಗೇಟ್‌ನ ಪ್ಲೇಟ್‌ ಮುರಿದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ಮುನಿರಾಬಾದ್‌ನ ಪಂಪಾವನ, ಅಂಬೇಡ್ಕರ್‌ ಕಾಲೋನಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿದೆ.

ತೀವ್ರ ಪ್ರವಾಹದಿಂದ ಕಂಗೆಟ್ಟಿದ್ದ ಧಾರವಾಡದ ಅಳ್ನಾವರ, ಹುಬ್ಬಳ್ಳಿಯ ದೇವಿನಗರ, ನವಲಗುಂದ, ಕುಂದಗೋಳ ತಾಲೂಕಿನ ಗ್ರಾಮಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರವಾಹ ಸಂಪೂರ್ಣ ಇಳಿದದ್ದು ಜನರೆಲ್ಲ ಪರಿಹಾರ ಕೇಂದ್ರದಿಂದ ಮನೆಗಳತ್ತ ತೆರಳುತ್ತಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲೂ ನದಿಗಳ ನೀರಿನ ಮಟ್ಟಇಳಿಕೆಯಾಗಿದೆ. ಹೆಚ್ಚಿನ ಕಡೆ ಭೂಕುಸಿತಗಳು ತೆರವಾಗಿದ್ದು ರಸ್ತೆ ಸಂಚಾರ ಸುಗಮವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ವಾಹನಗಳ ಸಂಚಾರ ನಿಷೇಧ ಆದೇಶವನ್ನು ಮತ್ತೆ ಕೆಲವು ದಿನಗಳಿಗೆ ವಿಸ್ತರಿಸಲಾಗಿದೆ.