ಶಿವರಾತ್ರಿಯ ದಿನದಂದೇ ಧಾರವಾಡ ಜಿಲ್ಲೆ ಗುಂಡಿನ ಸದ್ದು ಮೊಳಗಿದೆ. ಎರಡು ಪ್ರತಿಷ್ಠಿತ ಕುಟುಂಬಗಳು ಆಸ್ತಿಗಾಗಿ ಕಾದಾಟ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಸುತ್ತಿನ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಹುಬ್ಬಳ್ಳಿ(ಫೆ.25): ಶಿವರಾತ್ರಿಯ ದಿನದಂದೇ ಧಾರವಾಡ ಜಿಲ್ಲೆ ಗುಂಡಿನ ಸದ್ದು ಮೊಳಗಿದೆ. ಎರಡು ಪ್ರತಿಷ್ಠಿತ ಕುಟುಂಬಗಳು ಆಸ್ತಿಗಾಗಿ ಕಾದಾಟ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಸುತ್ತಿನ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ 2 ಪ್ರತಿಷ್ಠಿತ ಕುಟುಂಬಗಳ ‌ಮಧ್ಯೆ ಮಾರಾಮಾರಿ ನಡೆದಿದೆ. ಆಸ್ತಿ ವಿಚಾರವಾಗಿ ಕುಂದಗೋಳದ ಮಾಜಿ ಶಾಸಕ ಅಕ್ಕಿ ಬಂಧುಗಳು ಹಾಗೂ ನಿವೃತ್ತ ಡಿವೈಎಸ್ಪಿ, ಪಿ.ಎಸ್. ಪಾಟೀಲ್ ಕುಟುಂಬದ ಮಧ್ಯೆ ಮಾರಾಮಾರಿಯಾಗಿದೆ. ಸುಮಾರು 6 ಜನರ ಗ್ಯಾಂಗ್ ನೊಂದಿಗೆ ಆಗಮಿಸಿದ ನಿವೃತ್ತ ಡಿವೈಎಸ್‌ಪಿ, ಪಿ ಎಸ್‌ ಪಾಟೀಲ್ ಪುತ್ರರಾದ ಶರತ್ ಹಾಗೂ ಕಿಶೋರ್, ಮಾಜಿ ಶಾಸಕ‌ ಮಲ್ಲಿಕಾರ್ಜುನ ‌ಅಕ್ಕಿ ಸಂಬಂಧಿಕರಾದ ವೆಂಕನಗೌಡ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಾಲದಕ್ಕೆ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಗುಂಡು ಯಾರಿಗೂ ತಾಗಿಲ್ಲ. ಘಷ೯ಣೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದಕ್ಕೆ ನಾಲ್ವರಿಗೆ ಗಾಯಗಳಾಗಿದೆ.

ಕಳೆದ ಕೆಲ ವರ್ಷಗಳಿಂದ ನಿವೃತ್ತ ಡಿವೈಎಸ್‌ಪಿ, ಪಿ.ಎಸ್ ಪಾಟೀಲ್ ಹಾಗೂ ಗಾಯಾಳುಗಳಾದ ವೆಂಕನಗೌಡ ಮಧ್ಯೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಿತ್ತು. ನಿನ್ನೆ, 6 ಜನರ ತಂಡದೊಂದಿಗೆ ಆಗಮಿಸಿದ ಡಿವೈಎಸ್‌ಪಿ ಪುತ್ರ‌ ಕಿಶೋರ್ ಹಾಗೂ ಶರತ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪಿಸ್ತೂಲ್ ಹಾಗೂ ಬಂದೂಕು ಹಿಡಿದು ಧಮ್ಕಿ ಹಾಕಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಆದರೆ‌ ಒಂದು ಮೂಲದ ‌ಪ್ರಕಾರ ಘಷ೯ಣೆ ವೇಳೆ ಸ್ವತಃ ನಿವೃತ್ತ ಡಿವೈಎಸ್ಪಿ ಪಿ.ಎಸ್ ಪಾಟೀಲ್ ತಮ್ಮ ಬಳಿ ಇದ್ದ ರೀವಲ್ವರ್'ನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಘಟನೆಯ ಬಳಿಕ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರೆ ಹಿಡಿದು ಪೋಲಿಸರಿಗೆ‌ ಒಪ್ಪಿಸಿದ್ದು, ಡಿವೈಎಸ್ಪಿ ಪುತ್ರರು ಪರಾರಿಯಾಗಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.