Asianet Suvarna News Asianet Suvarna News

ಬಯೋಕಾನ್ ಕ್ಯಾಂಪಸ್'ನಲ್ಲಿ ಬೆಂಕಿ : ವಿಷಾನಿಲ ಸೋರಿಕೆ !

ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಿಗೆ ಆವರಿಸಿರುವ ಕೆಟ್ಟ ವಾಸನೆ ಬರುತ್ತಿದ್ದು, ಸಾರ್ವಜನಿಕರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಾರೆ.

Fire at Biocan campus

ಬೆಂಗಳೂರು(ಡಿ.12): ಜಿಗಣಿ- ಬೊಮ್ಮಸಂದ್ರ ಲಿಂಕ್ ರಸ್ತೆಯಲ್ಲಿರುವ ಬಯೋಕಾನ್ ಟೆಕ್ ಪಾರ್ಕ್‌ನ ಸಿಂಜೆನ್ ಕಂಪೆನಿಯ 3ನೇ ಮಹಡಿಯಲ್ಲಿರುವ ಲ್ಯಾಬ್ ಸ್ಕೇಲ್ ಪ್ರೋಸೆಸಿಂಗ್ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 7.30ರ ಸುಮಾರಿನಲ್ಲಿ 100 ಎಕರೆ ವ್ಯಾಪ್ತಿಯಲ್ಲಿರುವ ಕಂಪೆನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ 16 ಅಗ್ನಿಶಾಮಕ ವಾಹನಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ರಾತ್ರಿ ಪಾಳಿಯ ನೂರಾರು ಮಂದಿ ಕೆಲಸ ಮಾಡುತ್ತಿದ್ದು, ಬೆಂಕಿಗಾಹುತಿಯಾದ ಸ್ಥಳದಲ್ಲಿ ನಾಲ್ಕೈದು ಮಂದಿ ಇದ್ದಾರೆ ಎಂಬ ಮಾಹಿತಿಯಿದೆ. ಭಾರೀ ಮಳೆ ಸುರಿಯುತ್ತಿದ್ದರಿಂದ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ತೊಂದರೆಯಾಗುತ್ತಿದೆ. ಆದರೂ ಕಾರ್ಯಾಚರಣೆ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಬೆಂಕಿ ಕಿನ್ನಾಲಿಗೆ ವಿಸ್ತರಿಸುತ್ತಿದ್ದು, ಮಂಗಳವಾರ ಕೂಡ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಅಗ್ನಿಶಾಮಕ ದಳದ ಅಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ. ಇದುವರೆಗೂ ಯಾವುದೇ ಪ್ರಾಣ ಹಾನಿಯಾಗಿರುವ ವರದಿಯಾಗಿಲ್ಲ. ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಆದರೆ, ಮಳೆ ಸುರಿಯುತ್ತಿರುವುದರಿಂದ ತೊಡಕಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಉದ್ಯೋಗಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಂಜೆನ್ ಕಂಪೆನಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಚಿತ್ರೀಕರಣಕ್ಕೆ ಅಡ್ಡಿ

ಅಗ್ನಿ ಅವಘಡವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮ ಪ್ರತಿನಿಗಳ ಮೊಬೈಲ್ ಕಸಿದುಕೊಂಡ ಹೆಬ್ಬಗೋಡಿ ಠಾಣೆ ಪಿಎಸ್‌ಐ ಮಂಜುನಾಥ್ ಅವರು ದರ್ಪ ಪ್ರದರ್ಶಿಸಿದ್ದಾರೆ. ರಾಸಾಯನಿಕ ವಸ್ತು ಸುಟ್ಟರಿಂದ ಸಾರ್ವಜನಿಕರು ಸಂಚಾರ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮದವರಿಗೆ ಧಮ್ಕಿ ಹಾಕಿದ ಪಿಎಸ್‌ಐ ಮಂಜುನಾಥ್, ಮೊಬೈಲ್ ಕಸಿದು ಕಾರ್ಖಾನೆಯವರು ಚಿತ್ರೀಕರಿಸಲು ಯಾರನ್ನು ಬಿಡಬಾರದೆಂದು ಸೂಚಿಸಿದ್ದಾರೆ ಎಂದು ಕೂಗಾಡಿದ್ದಾರೆ. ಅಲ್ಲದೇ ಘಟನೆ ನೋಡಲು ಕಾರ್ಖಾನೆ ಮುಂದೆ ಜಮಾಯಿಸಿದ್ದ ನೂರಾರು ಸಾರ್ವಜನಿಕ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಚದುರಿಸಿದ್ದಾರೆ.

Follow Us:
Download App:
  • android
  • ios