ಬೆಂಗಳೂರು [ಜು.07]:  ಇತ್ತೀಚಿಗೆ ರಾಯಚೂರಿನಲ್ಲಿ ಮುಖ್ಯಮಂತ್ರಿಗಳ ವಾಹನ ತಡೆದು ಧರಣಿ ನಡೆಸಿ ವಿವಾದಕ್ಕೀಡಾಗಿದ್ದ ಟಿಯುಸಿಐ (ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ) ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಸಿದ್ದು, ನಗರದಲ್ಲಿ ನಿಗದಿತ ಅವಧಿ ಮುಗಿದ ನಂತರ ಪ್ರತಿಭಟಿಸಿದ ಆರೋಪದ ಮೇರೆಗೆ 360 ಮಂದಿ ವಿರುದ್ಧ ಉಪ್ಪಾರಪೇಟೆ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಿಸಿದ್ದಾರೆ.

ತುಂಗಾಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ 14 ತಿಂಗಳ ವೇತನ ಬಿಡುಗಡೆ, ಹೊರಗುತ್ತಿಗೆ ಬದಲು ಪರ್ಯಾಯ ವ್ಯವಸ್ಥೆ ಹಾಗೂ 15 ವರ್ಷದ ಭವಿಷ್ಯ ನಿಧಿ ಆಗ್ರಹಿಸಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಟಿಯುಸಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕಾರ್ಮಿಕರು, ಪಶ್ಚಿಮ ವಿಭಾಗದ ಡಿಸಿಪಿ ಅವರಿಂದ ಅನುಮತಿ ಪಡೆದಿದ್ದರು. ಆದರೆ ತಮ್ಮ ಪ್ರತಿಭಟನೆಯನ್ನು 2ನೇ ದಿನಕ್ಕೆ ಮುಂದುವರಿಸಿದ ಪರಿಣಾಮ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಸಂಘಟನೆ ಅಧ್ಯಕ್ಷ ಮಾನಸಯ್ಯ, ಉಪ ಕಾರ್ಯದರ್ಶಿ ಜಿ.ಅಡವಿರಾವ್‌, ಖಜಾಂಚಿ ಅಮೀರ್‌ ಅಲಿ, ರಾಜ್ಯ ಕಾರ್ಯದರ್ಶಿ ಗೋನಲ್‌, ಉಪಾಧ್ಯಕ್ಷ ಚನ್ನಪ್ಪ ಕೊಟ್ಟಾರಿಕಿ, ಕಾನೂನು ಸಲಹೆಗಾರ ನಾಗಲಿಂಗಸ್ವಾಮಿ, ಸಿದ್ದಪ್ಪಗೌಡ, ರಮೇಶ್‌ ಕೊಟ್ಟನಾಕಲ್‌, ಶರಣಪ್ಪ ಉದ್ನಾಲ್‌ ಹಾಗೂ ರಾಮಣ್ಣ ಅವರ ಹೆಸರು ನಮೂದಾಗಿದ್ದು, 350 ಮಂದಿ ಇತರರು ಎಂದು ಉಲ್ಲೇಖವಾಗಿದೆ.

ಒಂದು ದಿನಕ್ಕೆ ಅನುಮತಿ:

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿಗೆ ನಿರ್ಧರಿಸಿದ್ದ ಕಾರ್ಮಿಕರು, ಈ ಸಂಬಂಧ ಅನುಮತಿ ಕೋರಿ ಪಶ್ಚಿಮ ವಿಭಾಗ ಡಿಸಿಪಿ ಬಿ.ರಮೇಶ್‌ ಅವರಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ಪರಿಶೀಲಿಸಿದ ಡಿಸಿಪಿ, ಬುಧವಾರ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಿದ್ದರು.

ಆದರೆ ಪೂರ್ವನಿಗದಿತ ಅವಧಿ ಮುಗಿದ ನಂತರವು ಪ್ರತಿಭಟನೆ ನಡೆಸುತ್ತಿದ್ದ ಕಾರಣ ಪೊಲೀಸರು, ಧರಣಿ ಹಿಂಪಡೆಯುವಂತೆ ತಿಳಿಸಿದ್ದರು. ಈ ಮನವಿ ತಿರಸ್ಕರಿಸಿದ ಕಾರ್ಮಿಕರು, ಪ್ರತಿಭಟನೆ ಮುಂದುವರೆಸಲು ಅನುಮತಿ ನೀಡುವಂತೆ ಮತ್ತೆ ಕೋರಿದ್ದರು. ಈ ಅನುಮತಿ ನಿರಾಕರಿಸಿದ ಡಿಸಿಪಿ, ತಕ್ಷಣವೇ ಪ್ರತಿಭಟನೆ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಇದನ್ನು ಧಿಕ್ಕರಿಸಿದ ಕಾರ್ಮಿಕರು, ಗುರುವಾರ ಸಹ ಪ್ರತಿಭಟನೆ ಮುಂದುವರೆಸಿದ್ದರು. ಆಗ ಅವರನ್ನು ಬಲವಂತವಾಗಿ ತೆರವುಗೊಳಿಸಿದ ಪೊಲೀಸರು, ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಕಾರ್ಮಿಕರು, ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ತೆರಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಸಹನೆ ಕಳೆದುಕೊಂಡಿದ್ದ ಮುಖ್ಯಮಂತ್ರಿಗಳು, ಮೋದಿಗೆ ಓಟು ಹಾಕಿ, ಕೆಲಸ ಮಾಡಿಕೊಡಲು ನಮ್ಮನ್ನು ಕೇಳ್ತೀರಾ. ಲಾಠಿಚಾಜ್‌ರ್‍ ಮಾಡಿಸುವೆ ಎಂದು ಗುಡುಗಿದ್ದು ವಿವಾದವಾಗಿತ್ತು.

ಫ್ರೀಡಂ ಪಾರ್ಕ್ ಸುತ್ತ ಸೂಕ್ತ ಬಂದೋಬಸ್ತ್

ಜೂ.12ರಿಂದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ನಡೆಸುವ ಪ್ರತಿಭಟನೆಗಳಿಂದ ತೊಂದರೆ ಉಂಟಾಗದಂತೆ ಮುಂಜಾಗ್ರತೆæ ವಹಿಸಿರುವ ಪೊಲೀಸ್‌ ಆಯುಕ್ತ ಅಲೋಕ್‌ಕುಮಾರ್‌, ಈಗ ಫ್ರೀಡಂ ಪಾರ್ಕ್ ಸುತ್ತಮುತ್ತ ಸೂಕ್ತ ಬಂದೋಬಸ್‌್ತ ಕಲ್ಪಿಸಲು ಮುಂದಾಗಿದ್ದಾರೆ.

ಫ್ರೀಡಂ ಪಾರ್ಕ್ಗೆ ಶನಿವಾರ ಭೇಟಿ ನೀಡಿದ ಪರಿಶೀಲಿಸಿದ ಆಯುಕ್ತರು, ಪ್ರತಿಭಟನೆಗಳಿಂದ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಇತ್ತೀಚಿಗೆ ಮೀಸಲಾತಿ ಜಾರಿಗೆ ಒತ್ತಾಯಿಸಿ ವಾಲ್ಮೀಕಿ ಸಮುದಾಯದ ಪ್ರತಿಭಟನೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಈ ಬಗ್ಗೆ ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಕಾರಣ ಕಾರ್ಮಿಕರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಎಫ್‌ಐಆರ್‌ನಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 10 ಮಂದಿ ಹೆಸರು ಮಾತ್ರ ಉಲ್ಲೇಖವಾಗಿದೆ.

- ರಮೇಶ್‌ ಬಾನೋತ್‌, ಡಿಸಿಪಿ, ಪಶ್ಚಿಮ ವಿಭಾಗ