Asianet Suvarna News Asianet Suvarna News

ಸಂಚಾರ ನಿಯಮ ಉಲ್ಲಂಘನೆ: 61 ಕೋಟಿ ರು.ದಂಡ ಸಂಗ್ರಹ

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು ವಾಹನ ದಟ್ಟಣೆ ನಿಯಂತ್ರಿಸಲು ನಾಲ್ಕೂ ದಿಕ್ಕುಗಳಲ್ಲಿ ಕಾರಿಡಾರ್‌ಗಳ ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು. ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ, ಸಿಗ್ನಲ್‌ ಉಲ್ಲಂಘನೆಗಾಗಿ 2016-17ನೇ ಸಾಲಿನಲ್ಲಿ ಒಟ್ಟು 97 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು .61 ಕೋಟಿ ದಂಡ ವಸೂಲು ಮಾಡಲಾಗಿದೆ ಎಂದರು.

Fine Collected In Traffic Rule Vilolation

ಬೆಂಗಳೂರು(ಮಾ.24): ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು ವಾಹನ ದಟ್ಟಣೆ ನಿಯಂತ್ರಿಸಲು ನಾಲ್ಕೂ ದಿಕ್ಕುಗಳಲ್ಲಿ ಕಾರಿಡಾರ್‌ಗಳ ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು. ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ, ಸಿಗ್ನಲ್‌ ಉಲ್ಲಂಘನೆಗಾಗಿ 2016-17ನೇ ಸಾಲಿನಲ್ಲಿ ಒಟ್ಟು 97 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು .61 ಕೋಟಿ ದಂಡ ವಸೂಲು ಮಾಡಲಾಗಿದೆ ಎಂದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಡಾ. ಜಯಮಾಲ ರಾಮಚಂದ್ರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಂಚಾರ ಪೊಲೀಸರು ದಂಡ ವಿಧಿಸುವ ಮೂಲಕ ಸಂಚಾರ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ ಎಂದರು. ಟ್ರಾಫಿಕ್‌ ನಿಯಂತ್ರಣ ಮಾಡದೇ ಕೇವಲ ಮರೆಯಲ್ಲಿ ನಿಂತು ಟ್ರಾಫಿಕ್‌ ಪೊಲೀಸರು ದಂಡ ವಸೂಲಿ ಮಾಡುತ್ತಿರುತ್ತಾರೆ ಎಂದು ಹೇಳಿದ ಜಯಮಾಲ ವಾದವನ್ನು ನಿರಾಕರಿಸಿದರು. ಬೆಂಗಳೂರು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು 66 ಲಕ್ಷ ವಾಹನಗಳಿವೆ. ಇತರೆ ನಗರಗಳಾದ ಚೆನ್ನೈ(44 ಲಕ್ಷ), ಹೈದರಾಬಾದ್‌(23 ಲಕ್ಷ), ಕೊಲ್ಕೊತ್ತಾ 28 ಲಕ್ಷ, ಮುಂಬೈ (23 ಲಕ್ಷ) ಲಕ್ನೋ (20 ಲಕ್ಷ)ಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಲ್ಲೇ ಅತಿ ಹೆಚ್ಚು ವಾಹನಗಳಿವೆ. ಪ್ರತಿ ದಿನವೂ 1250 ದ್ವಿಚಕ್ರ ವಾಹನಗಳು, 450 ನಾಲ್ಕು ಚಕ್ರದ ವಾಹನಗಳು ನೋಂದಣಿ ಆಗುತ್ತಿವೆ. 2003ರಲ್ಲಿ ಕೇವಲ 19 ಲಕ್ಷದಷ್ಟಿದ್ದ ವಾಹನಗಳ ಸಂಖ್ಯೆ ಇದೀಗ 4 ಪಟ್ಟು ಹೆಚ್ಚಳವಾಗಿದೆ. ಎಲ್ಲಾ ತರದ ರಸ್ತೆಗಳೂ ಸೇರಿ ಬೆಂಗಳೂರಿನಲ್ಲಿ ಒಟ್ಟು 13 ಸಾವಿರ ಕಿ.ಮೀ. ರಸ್ತೆ ಇದ್ದು 46.54 ಲಕ್ಷ ದ್ವಿಚಕ್ರ ವಾಹನಗಳು, 13 ಲಕ್ಷ ನಾಲ್ಕು ಚಕ್ರದ ವಾಹನಗಳಿವೆ ಎಂದು ವಿವರ ನೀಡಿದರು.

ಸಂಚಾರ ದಟ್ಟಣೆ ನಿಯಂತ್ರಣ: ಸಂಚಾರ ನಿರ್ವಹಣೆ ಪೊಲೀಸರಿಗೆ ಬಹುದೊಡ್ಡ ಸವಾಲಾಗಿದೆ. ವಾಹನಗಳ ಹೆಚ್ಚಳಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸದೇ ಇರುವುದು ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ. ಹೀಗಾಗಿ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣವೂ ಅದರ ಭಾಗವಾಗಿತ್ತು. ಇದೀಗ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಕಾರಿಡಾರ್‌ಗಳ ನಿರ್ಮಾಣದ ಮೂಲಕ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳ ಡಾಮರೀಕರಣ ನಡೆಯುತ್ತಿದ್ದು ಶೀಘ್ರದಲ್ಲೇ ಈ ಮಾರ್ಗಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿವೆ ಎಂದರು.

ನಗರದಲ್ಲಿ ಒಟ್ಟು 3400 ಸಂಚಾರ ಪೊಲೀಸರಿದ್ದಾರೆ. ಒಟ್ಟು 5200 ಮಂಜೂರಾದ ಹುದ್ದೆಗಳಿದ್ದು ಖಾಲಿ ಇರುವ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ. ಈ ಮಾಚ್‌ರ್‍ನಲ್ಲಿ ಖಾಲಿ ಇರುವ 1100 ಹುದ್ದೆ ಭರ್ತಿ ಆಗಲಿದೆ. ಒಟ್ಟು 167 ಜಂಕ್ಷನ್‌ಗಳಲ್ಲಿ ಪ್ರಬಲವಾದ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಇಡೀ ದೇಶದಲ್ಲೇ ಎಲ್ಲೂ ಇರದ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ) ನಗರದಲ್ಲಿದೆ ಎಂದು ಸಚಿವ ಪರಮೇಶ್ವರ್‌ ತಿಳಿಸಿದರು. ಹೆಲ್ಮೆಟ್‌ ಧರಿಸದೇ ಇರುವುದು, ವ್ಹೀಲಿಂಗ್‌ ಮಾಡುವುದು, ಅಡ್ಡಾದಿಡ್ಡಿ ವಾಹನ ಚಾಲನೆ ಅಪಾಯಗಳ ಕುರಿತು ಪಠ್ಯಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸುವಂತೆ ಜಯಮಾಲಾ ಆಗ್ರಹಿಸಿದರು.

Follow Us:
Download App:
  • android
  • ios