Asianet Suvarna News Asianet Suvarna News

ಹಣಕಾಸು ಅಧಿಕಾರಿಗಳಿಂದಲೇ ಸಾಲಮನ್ನಾ ವಿರುದ್ಧ ಪ್ರಚಾರ!

ಸರ್ಕಾರ ಎಷ್ಟುದಿನ ಇರುತ್ತದೆ ಎಂಬುದು ಗೊತ್ತಿಲ್ಲದಿರುವ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಬೇಡಿ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಮ್ಮ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿರುವುದು ತಿಳಿದುಬಂದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ವಿಷಯ ಪ್ರಸ್ತಾಪಿಸಿದ್ದಾರೆ.

Financial officers make a publicity against loan waive off

ಬೆಂಗಳೂರು (ಜೂ. 26):  ಸರ್ಕಾರ ಎಷ್ಟುದಿನ ಇರುತ್ತದೆ ಎಂಬುದು ಗೊತ್ತಿಲ್ಲದಿರುವ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಬೇಡಿ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಮ್ಮ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿರುವುದು ತಿಳಿದುಬಂದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ವಿಷಯ ಪ್ರಸ್ತಾಪಿಸಿದ್ದಾರೆ.

ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಕುರಿತು ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರ ಜತೆಗಿನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರವು ಎಷ್ಟುದಿನ ಅಧಿಕಾರದಲ್ಲಿ ಇರುತ್ತದೆ ಎಂಬುದಾಗಿ ಕೆಲವು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಹುದ್ದೆ ಯಾರೋ ನೀಡಿದ ಭಿಕ್ಷೆಯಲ್ಲ. ಸರ್ಕಾರ ಅಧಿಕಾರದಲ್ಲಿ ಉಳಿಯುವ ಬಗ್ಗೆ ಅನಗತ್ಯ ಚರ್ಚೆ ಬೇಕಾಗಿಲ್ಲ. ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಸಾಲಮನ್ನಾ ವಿಚಾರದಲ್ಲಿ ಸಲಹೆ, ಸೂಚನೆಗಳಿದ್ದರೆ ನೀಡಿ. ಇಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವ ಕರ್ತವ್ಯ ಮತ್ತು ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಸರ್ಕಾರದ ಅಸ್ತಿತ್ವದ ಬಗ್ಗೆ ಸಂದೇಹಗಳು ಬೇಡ. ರೈತರ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ಅನುಕೂಲವಾಗಬೇಕು. ರೈತರ ಹೆಸರಲ್ಲಿ ಮಧ್ಯವರ್ತಿಗಳಿಗೆ ಲಾಭವಾಗಬಾರದು. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಅಧಿಕಾರಿಗಳ ಸಹಕಾರ ಅತ್ಯಗತ್ಯ. ಸಭೆಯಲ್ಲಿ ಹೇಳಲಾರದಂತಹ ಹಲವು ವಿಷಯಗಳು ಗಮನಕ್ಕೆ ಬಂದಿವೆ ಎಂದು ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು. 

Follow Us:
Download App:
  • android
  • ios