ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವ ಸಿನಿಮಾ ಮಂದಿ ಯಾರು..?

Film Stars Contest Election
Highlights

ಕನ್ನಡ ಸಿನಿಮಾ ರಂಗದ ಮೂವರು ಗಣ್ಯರು ಈ ಬಾರಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಬೆಂಗ ಳೂರಿನ ಚಾಮರಾಜ ಪೇಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲಹರಿ ವೇಲು, ಯಶವಂತಪುರದಿಂದ ಜಗ್ಗೇಶ್, ಮಲ್ಲೇಶ್ವರಂ ಕೇತ್ರದಿಂದ ರಾಕ್‌ಲೈನ್ ವೆಂಕಟೇಶ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆದಿದೆ.

ಬೆಂಗಳೂರು: ಕನ್ನಡ ಸಿನಿಮಾ ರಂಗದ ಮೂವರು ಗಣ್ಯರು ಈ ಬಾರಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಬೆಂಗ ಳೂರಿನ ಚಾಮರಾಜ ಪೇಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲಹರಿ ವೇಲು, ಯಶವಂತಪುರದಿಂದ ಜಗ್ಗೇಶ್, ಮಲ್ಲೇಶ್ವರಂ ಕೇತ್ರದಿಂದ ರಾಕ್‌ಲೈನ್ ವೆಂಕಟೇಶ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಇಬ್ಬರು ಚಿತ್ರೋದ್ಯಮಿಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಖ್ಯಾತ ಚಿತ್ರನಟ ಜಗ್ಗೇಶ್ ಅವರನ್ನು ಯಶವಂತಪುರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದು, ಮಾತುಕತೆಯ ಹಂತದಲ್ಲಿದೆ.

ಒಂದು ವೇಳೆ ಜಗ್ಗೇಶ್ ಒಪ್ಪಿದಲ್ಲಿ ಅವರನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಅದೇ ರೀತಿ  ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಲಹರಿ ಆಡಿಯೋ ಕಂಪನಿ ಮಾಲೀಕರೂ ಆಗಿರುವ ಲಹರಿ ವೇಲು ಅವರಿಗೆ ಟಿಕೆಟ್ ನೀಡುವ ಸಂಭವ ಹೆಚ್ಚಾಗಿದ್ದು, ಈ ಬಗ್ಗೆ ಪಕ್ಷದ ಹಿರಿಯ ನಾಯಕರೂ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಉಭಯ ಮುಖಂಡರ ಪೈಕಿ ಜಗ್ಗೇಶ್ ಅವರು ಈಗಾಗಲೇ ಒಂದು ಬಾರಿ ತುಮಕೂರು ಜಿಲ್ಲೆ ತುರು ವೇಕೆರೆ ಕ್ಷೇತ್ರದ ಶಾಸಕರಾಗಿ ಮತ್ತು ನಂತರ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜತೆಗೆ ಪಕ್ಷದ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆ ಮತ್ತು ಪ್ರತಿಕ್ರಿಯೆಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವ ಅವರನ್ನು ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಹಿರಿಯ ನಾಯಕರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಕ್ಷೇತ್ರ ಪುನರ್‌ವಿಂಗಡಣೆ ನಂತರ ರಚನೆಯಾದ ಯಶವಂತಪುರ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ಬಾರಿಗೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸಿದ್ದರು. ನಂತರ ಕಳೆದ 2013ರ ಚುನಾವಣೆಯಲ್ಲಿ ಅವರು ಬಿಜೆಪಿ ತೊರೆದಿದ್ದರಿಂದ ಆ ಕ್ಷೇತ್ರ ಬಿಟ್ಟು  ರಾಜಾಜಿನಗರ ಕ್ಷೇತ್ರಕ್ಕೆ ವಲಸೆ ಹೋಗಿ ಸೋಲುಂಡರು. ಆ ಚುನಾವಣೆಯಲ್ಲಿ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದೇ ಇದ್ದುದರಿಂದ ಪ್ರಬಲ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ ಬಿಜೆಪಿ ಆ ಕ್ಷೇತ್ರ ಕಳೆದುಕೊಂಡು ಕಾಂಗ್ರೆಸ್ ವಶಕ್ಕೆ ನೀಡಿತು.

ಯಶವಂತಪುರ ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಾಬಲ್ಯರಾಗಿದ್ದು, ನಂತರದ ಸ್ಥಾನಗಳಲ್ಲಿ ವೀರಶೈವ ಲಿಂಗಾಯತ ಸೇರಿದಂತೆ ಹಲವು ಸಮುದಾಯಗಳ ಮತದಾರರು ಪ್ರಮುಖವಾಗಿದ್ದಾರೆ. ಕಾಂಗ್ರೆಸ್ಸಿನ ಹಾಲಿ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿರುವ ಬಿಜೆಪಿ ನಾಯಕರು ಜಗ್ಗೇಶ್ ಅವರ ಹೆಸರನ್ನು ಪರಿಶೀಲಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಲಹರಿ ವೇಲು ಅವರು ಚಾಮರಾಜಪೇಟೆಯಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಹೊಸ ಮುಖವನ್ನಾಗಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಬಿಬಿಎಂಪಿ ಮಾಜಿ ಸದಸ್ಯ ಬಿ.ವಿ.ಗಣೇಶ್, ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದರೂ ಹಾಲಿ ಜೆಡಿಎಸ್‌ನ ಶಾಸಕ ಹಾಗೂ ಮುಂಬರುವ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಜಮೀರ್ ಅಹಮದ್ ಅವರನ್ನು ಎದುರಿಸಲು ಲಹರಿ ವೇಲು ಅವರನ್ನು ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂಬ ನಿಲುವಿಗೆ ಬರಲಾಗುತ್ತಿದೆ ಎನ್ನಲಾಗಿದೆ.

loader