ಬರಲ್ಲ ಅಂತಿದ್ದ ಜನರ ಬಳಿಯೇ ಠಾಣೆ ಕೊಂಡೊಯ್ದ ಸಿಂಹಿಣಿ!
ಪೊಲೀಸ್ ಠಾಣೆ ಎಂದರೆ ಭಯ ಪಡುತ್ತಿದ್ದ ಗ್ರಾಮಗಳು| ಪೊಲೀಸರನ್ನು ಕಂಡರೆ ದೂರ ಓಡುತ್ತಿದ್ದ ಜನ| ಜನರ ವಿಶ್ವಾಸ ಗೆಲ್ಲಲು ಈ ಐಪಿಎಸ್ ಅಧಿಕಾರಿ ಮಾಡಿದ್ದೇನು?| ಪ್ರತಿ ಗ್ರಾಮಗಳಲ್ಲಿ ತಾತ್ಕಾಲಿಕ ಮಾದರಿ ಪೊಲೀಸ್ ಠಾಣೆ ನಿರ್ಮಾಣ| ಖುದ್ದು ಭೇಟಿ ನೀಡಿ ಜನರ ಕುಂದುಕೊರತೆ ಆಲಿಸುವ ಮಹಿಳಾ ಪೊಲೀಸ್ ಅಧಿಕಾರಿ| ಐಪಿಎಸ್ ಅಧಿಕಾರಿ ವಿನೂತಾ ಸಾಹು ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ
ಫೋಟೋ ಕೃಪೆ: ನವ್ ಭಾರತ್ ಟೈಮ್ಸ್
ಭಂಡಾರಾ(ಜ.09): ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೆಂದರೆ ಜನರಿಗೆ ಇಂದಿಗೂ ಏನೋ ಒಂದು ತರಹದ ಹೆದರಿಕೆ. ಕೆಲವರಿಗೆ ಪೊಲೀಸ್ ಠಾಣೆಗೆ ಹೋಗಲು ಪ್ರತಿಷ್ಠೆ ಕೂಡ ಅಡ್ಡ ಬರುತ್ತದೆ.
ಆದರೆ ಪೊಲೀಸ್ ಠಾಣೆಗಳು, ಪೊಲೀಸರು ಇರುವುದು ಸಮಾಜದ ಶಿಸ್ತು ಕಾಪಾಡಲು. ಶಾಂತಿ, ಸುವ್ಯವಸ್ಥೆ ಮತ್ತು ಕಾನೂನಿನ ಪರಿಪಾಲನೆಗಾಗಿ ಪೊಲೀಸರು ಇರುವುದು. ಸಾಮಾನ್ಯ ಜನರ ರಕ್ಷಣೆಗಾಗಿ ಪೊಲೀಸರು ಹಗಲಿರುಳು ದುಡಿಯುತ್ತಾರೆ. ಇಂತಹವರಿಂದ ದೂರ ಇರುವುದು ಎಂದರೆ ವ್ಯವಸ್ಥೆಯನ್ನು ಅಣುಕಿಸಿದಂತೆಯೇ ಸರಿ.
ಅದರಂತೆ ಮಹಾರಾಷ್ಟ್ರದ ಗ್ರಾಮವೊಂದರ ಜನರಿಗೂ ಪೊಲೀಸರೆಂದರೆ ಎಲ್ಲಿಲ್ಲದ ಭಯ. ಗ್ರಾಮಸ್ಥರ ಮನಗೆಲ್ಲಲು ಎಷ್ಟೇ ಪ್ರಯತ್ನ ಮಾಡಿದರೂ ಪೊಲೀಸರನ್ನು ಕಂಡೊಡನೆ ಇವರು ದೂರ ಸರಿಯುತ್ತಿದ್ದರು. ಇದನ್ನರಿತ ಮಹಿಳಾ ಐಪಿಎಸ್ ಅಧಿಕಾರಿಯೋರ್ವರು ಜನರಲ್ಲಿರುವ ಪೊಲೀಸರ ಮೇಲಿರುವ ಭಯ ಹೋಗಲಾಡಿಸಲು ಕೈಗೊಂಡ ಕ್ರಮ ನಿಜಕ್ಕೂ ಶ್ಲಾಘನೀಯ.
ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಐಪಿಎಸ್ ಅಧಿಕಾರಿ ವಿನೂತಾ ಸಾಹೂ, ಪೊಲೀಸ್ ಠಾಣೆಗೆ ಬರಲು ಹೆದರುತ್ತಿದ್ದ ಜನರಿಗಾಗಿ ಪೊಲೀಸ್ ಠಾಣೆಯನ್ನೇ ಜನರ ಬಳಿ ಕೊಂಡೊಯ್ಯುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
2017ರಿಂದ ಪ್ರತಿ ವರ್ಷ ಪ್ರತಿ ಗ್ರಾಮದಲ್ಲೂ ತಾತ್ಕಾಲಿಕವಾಗಿ ಮಾದರಿ ಪೊಲೀಸ್ ಠಾಣೆಗಳನ್ನು ನಿರ್ಮಿಸುತ್ತಾರೆ. ಗ್ರಾಮದ ಶಾಲೆ ಅಥವಾ ಪಂಚಾಯ್ತಿ ಕಟ್ಟಡಗಳಲ್ಲಿ ಕೆಲ ದಿನಗಳವರೆಗೆ ಮಾದರಿ ಪೊಲೀಸ್ ಠಾಣೆ ನಿರ್ಮಿಸಿ, ಜನ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳುವಂತೆ ಮನವಿ ಮಾಡುತ್ತಾರೆ ವಿನೂತಾ ಸಾಹೂ.
ಇನ್ನು ವಿನೂತಾ ಸಾಹೂ ಅವರ ಈ ಪ್ರಯತ್ನದಿಂದಾಗಿ ಜನ ಕೂಡ ಪೊಲೀಸರೊಂದಿಗೆ ಸಹಕರಿಸುತ್ತಿದ್ದು, ಈ ತಾತ್ಕಾಲಿಕ ಮಾದರಿ ಪೊಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ತಮ್ಮ ಸಮಸ್ಯೆಗಳನ್ನು ಹೇಳಿ ಕೊಳ್ಳುತ್ತಿದ್ದಾರೆ.