ಮನಿಲಾ(ಆ.18): ಮಗಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಪ್ರತಿಯೊಬ್ಬ ತಂದೆಯ ಪಾಲಿಗೂ ತುಂಬ ಭಾವನಾತ್ಮಕವಾದ ಕ್ಷಣ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಮಗಳಿಂದ ಶಾಶ್ವತವಾಗಿ ಬೇರೆಯಾಗುವ ಭಾವ ಓರ್ವ ತಂದೆ ಮಾತ್ರ ವಿವರಿಸಬಲ್ಲ.

ಅದರಂತೆ ಕ್ಯಾನ್ಸರ್ ಪೀಡಿತ ತಂದೆಯೋರ್ವ ಆಗಷ್ಟೇ ಮದುವೆಯಾದ ತನ್ನ ಮಗಳನ್ನು ಬೀಳ್ಕೊಡಲು ಆಸ್ಪತ್ರೆಯ ಸ್ಟೆಚರ್ಸ್ ಮೇಲೆಯೇ ಬಂದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.  ಮನಿಲಾದ ಪಾಪೂ ಪೆಡ್ರೋ ವಿಲ್ಲರಿನ್ ಎಂಬುವವರು ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತಮ್ಮ ಮಗಳು ಚಾರ್ಲೊಟ್ಟೆ ವಿಲ್ಲರಿನ್ ಅವರ ಮದುವೆ ನೋಡಬೇಕೆಂಬುದು ಅವರ ಆಸೆಯಾಗಿತ್ತು.

ತಂದೆಯ ಆಸೆಯಂತೆ ಮದುವೆ ಮಾಡಿಕೊಂಡ ಚಾರ್ಲೊಟ್ಟೆಳನ್ನು ಬೀಳ್ಕೊಡಲು ಪಾಪೂ ಪೆಡ್ರೋ ಚರ್ಚ್ ಗೆ ಬಂದು, ಸ್ಟೆಚರ್ಸ್ ಮೇಲೆ ಮಲಗಿಕೊಂಡೇ ಆಕೆಯ ಕೈ ಹಿಡಿದು ಬಿಳ್ಕೊಟ್ಟಿದ್ದಾರೆ ಪಾಪೂ ಪೆಡ್ರೋ.

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಪೂ ಪೆಡ್ರೋ ಬಹಳ ದಿನ ಬದುಕುಳಿಯುವುದು ಅನುಮಾನ ಎಂದು ವೈದ್ಯರು ಹೇಳಿದ್ದಾರೆ. ಈ ಕಾರಣದಿಂದ ಚಾರ್ಲೊಟ್ಟೆ ತಂದೆಯ ಆಸೆಯನ್ನು ಪೂರೈಸಿದ್ದು, ಚಾರ್ಲೊಟ್ಟೆಯ ಕೈ ಹಿಡಿದು ಪಾಪೂ ಪೆಡ್ರೋ ಬೀಳ್ಕೊಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.