ಆನೇಕಲ್‌ :  ಹೃದಯಾಘಾತದಿಂದ ಮೃತಪಟ್ಟತಂದೆಯ ದೇಹ ಮನೆಯಲ್ಲಿದ್ದರೂ ಜನ್ಮದಾತನ ಕಡೆಯ ಆಸೆಯನ್ನು ನೆರವೇರಿಸುವ ಸಲುವಾಗಿ ಮಗಳೊಬ್ಬಳು ಬಿಸಿಎ ಪರೀಕ್ಷೆ ಬರೆದು ನಂತರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಘಟನೆ ಆನೇಕಲ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಿತೃ ವಾಕ್ಯ ಪರಿಪಾಲನೆ ಮಾಡಿ ಸಾರ್ಥಕತೆ ಮೆರೆದ ಈಕೆ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲೂಕಿನ ಎ.ಮೇಡಹಳ್ಳಿ ನಿವಾಸಿ ಚಂದ್ರಪ್ಪ (50) ಎಂಬುವರ ಪುತ್ರಿ ಛಾಯಾ.

ಚಂದ್ರಪ್ಪ ವೃತ್ತಿಯಲ್ಲಿ ನೇಕಾರಿಕೆ ಮಾಡುತ್ತಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತನ್ನ ಮಗಳಾದರೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಹಂಬಲದಿಂದ ಆನೇಕಲ್‌ನ ವಿಶ್ವಚೇತನ ಕಾಲೇಜಿಗೆ ಸೇರಿಸಿದ್ದರು. ಹೃದಯಾಘಾತಕ್ಕೂ ಮುನ್ನ ಮಗಳನ್ನು ಕರೆದು ಯಾವುದೇ ಕಾರಣಕ್ಕೂ ಪರೀಕ್ಷೆ ತಪ್ಪಿಸಿಕೊಳ್ಳಬೇಡ, ಚೆನ್ನಾಗಿ ಓದಿ ನಿನ್ನ ಭವಿಷ್ಯವನ್ನು ನೀನೇ ರೂಪಿಸಿಕೊಳ್ಳಬೇಕು ಎಂದು ಹೇಳಿದ್ದರು. ಸ್ವಲ್ಪ ಸಮಯದಲ್ಲಿ ಅವರು ಮೃತಪಟ್ಟರು. ಮರು ದಿನ ಮಗಳು ಛಾಯಾ ತನ್ನ ತಂದೆಯ ಆಸೆಯಂತೆ ಅಂತಿಮ ವರ್ಷದ ಬಿಸಿಎ ಪರೀಕ್ಷೆ ಬರೆದು ಬಳಿಕ ತಂದೆಯ ಅಂತಿಮ ಕಾರ‍್ಯದಲ್ಲಿ ಭಾಗಿಯಾದಳು.

ಎಲ್ಲ ನೋವನ್ನು ನುಂಗಿಕೊಂಡು ಪರೀಕ್ಷೆ ಬರೆದು ಬಂದ ಛಾಯಾ, ತಂದೆಯ ಆಸೆಯಂತೆ ಪದವಿ ಪೂರ್ಣಗೊಳಿಸಿ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವೆ. ಕಾಲೇಜಿನ ಆಡಳಿತ ಮಂಡಳಿಯವರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಯಾರಾದರೂ ದಾನಿಗಳು ಸಹಾಯ ಹಸ್ತ ಚಾಚಿದಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸುವೆ ಎಂದರು.