ತುಮಕೂರು: ಕಳೆದ ತಿಂಗಳು ಹಾಸನ ಜಿಲ್ಲೆಯ ಬಾಗೂರು ನವಿಲೆ ಕಂಬಾಳ ಗ್ರಾಮಸ್ಥರು ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವಂತೆ ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಪತ್ರಬರೆದಿದ್ದರು. ಇದೀಗ ಶಿರಾ ತಾಲೂಕು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ತಮ್ಮನ್ನು ನೇಣು ಕುಣಿಕೆಯಿಂದ ಪಾರು ಮಾಡಿ ಎಂದು ಅಲ್ಲಿಯ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಳ್ಳಂಬೆಳ್ಳ ಗ್ರಾಮದ ಕೆರೆಗೆ ಹೇಮಾವತಿ ನೀರು ಹರಿಸಿದರೆ ಮದಲೂರು ಕೆರೆಗೆ ಹರಿಸುವ ಮಾರ್ಗದಲ್ಲಿಯೂ ಸುಮಾರು 11 ಕೆರೆಗಳು ತುಂಬಲಿವೆ. ಮದಲೂರು ಕೆರೆ ಸುತ್ತಮುತ್ತ ಇರುವ ಕಸಬಾ ಹೋಬಳಿ, ಹುಲಿಕುಂಟೆ, ದಿಡಗನಹಳ್ಳಿ ಅರೆಹಳ್ಳಿ, ಹೊನ್ನಗೊಂಡನಹಳ್ಳಿ, ಕೊಟ್ಟ, ಪಟ್ಟನಾಯಕನಹಳ್ಳಿಯ ಪ್ರದೇಶದಲ್ಲಿಯೂ ಅಂತರ್ಜಲ ಅಭಿವೃದ್ಧಿಯಾಗಲಿದ್ದು, ಕೂಡಲೇ ಹೇಮಾವತಿ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾನುವಾರ ಮದಲೂರು ಕೆರೆ ಅಂಗಳದಲ್ಲಿ ಸೇರಿದ ರೈತರು, ಗ್ರಾಮದ ಜನ್ಮಭೂಮಿ ರಕ್ಷಣಾಪಡೆ ನೇತೃತ್ವದಲ್ಲಿ ಎಲ್ಲರ ರಕ್ತ ಸಂಗ್ರಹಿಸಿ ಪತ್ರ ಬರೆದಿದ್ದು, ರಕ್ತದಲ್ಲಿಯೇ ಹಸ್ತಾಕ್ಷರ ಹಾಕಿ, ಹೆಬ್ಬೆಟ್ಟಿನ ಸಹಿ ಮಾಡಿದ್ದಾರೆ.