Asianet Suvarna News Asianet Suvarna News

ರೈತರ ಸಾಲ ಮನ್ನಾಗೆ ಬಳಕೆಯಾಗುವ ಹಣ ಯಾವ ಮೂಲದ್ದು..?

ಶತಾಯಗತಾಯ ರೈತರ ಸಾಲಮನ್ನಾ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಳಕೆಯಾಗದ ಹಣವನ್ನು ವಾಪಸ್‌ ಪಡೆದುಕೊಳ್ಳಲು ಮುಂದಾಗಿದೆ.

Farmer Loan Waiving  : CM Kumaraswamy Use MLA Fund

ಬೆಂಗಳೂರು :  ಶತಾಯಗತಾಯ ರೈತರ ಸಾಲಮನ್ನಾ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಳಕೆಯಾಗದ ಹಣವನ್ನು ವಾಪಸ್‌ ಪಡೆದುಕೊಳ್ಳಲು ಮುಂದಾಗಿದೆ.

ಹಣ ವಾಪಸ್‌ ಪಡೆಯುವ ಸಂಬಂಧ ರಾಜ್ಯ ಸರ್ಕಾರದಿಂದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಸುತ್ತೋಲೆ ರವಾನೆಯಾಗಿದ್ದು, ಅದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ವಿವಿಧ ಇಲಾಖೆಗಳ ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಆ ಸುತ್ತೋಲೆ ಹಾಗೂ ಪತ್ರದಲ್ಲಿ ಎಲ್ಲಿಯೂ ಸಾಲಮನ್ನಾಕ್ಕಾಗಿ ಸಂಪನ್ಮೂಲ ಕ್ರೋಢೀಕರಿಸಲು ಎಂಬುದನ್ನು ನಮೂದಿಸಿಲ್ಲ. ತಾಂತ್ರಿಕವಾಗಿ ಅದನ್ನು ನಮೂದಿಸಲು ಸಾಧ್ಯವಾಗುವುದಿಲ್ಲ. ವಾಪಸ್‌ ಬಂದ ಹಣವನ್ನು ಸಾಲಮನ್ನಾಕ್ಕಾಗಿ ಅಗತ್ಯವಿರುವ ಸಂಪನ್ಮೂಲಕ್ಕೆ ಬಳಸಲಾಗುತ್ತದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಶಾಸಕರು ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸರ್ಕಾರದಿಂದ ನಿರ್ದಿಷ್ಟವರ್ಷದಲ್ಲಿ ಬಿಡುಗಡೆಯಾದ ನಿಧಿಗಳ ಪೈಕಿ ಬಳಕೆಯಾಗದೇ ಉಳಿದ ಹಣ ಜಿಲ್ಲಾಧಿಕಾರಿಗಳ ಬಳಿ ಇದ್ದರೆ ಅದನ್ನು ಮುಂದಿನ ವರ್ಷಕ್ಕೆ ಮಾತ್ರ ಬಳಸಬಹುದಾಗಿದೆ. ಆ ಮೊತ್ತವು ಮುಂದಿನ ವರ್ಷದ ಕೊನೆಯಲ್ಲೂ ಖರ್ಚಾಗದೆ ಉಳಿದರೆ ರದ್ದುಪಡಿಸಲಾಗುವುದು ಎನ್ನುವುದನ್ನು ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರತಿಯೊಬ್ಬ ಶಾಸಕರಿಗೆ (ವಿಧಾನಸಭಾ ಮತ್ತು ವಿಧಾನಪರಿಷತ್‌ ಸದಸ್ಯರು) ವರ್ಷಕ್ಕೆ ಎರಡು ಕೋಟಿ ರು.ಗಳ ನಿಧಿ ನೀಡಲಾಗುತ್ತದೆ. ಕಾಮಗಾರಿಯನ್ನು ನಿರ್ಧರಿಸುವುದು ಶಾಸಕರ ಕೆಲಸವಾದರೂ ಅದನ್ನು ಅನುಷ್ಠಾನಗೊಳಿಸುವುದು ಮತ್ತು ಅನುದಾನ ಬಿಡುಗಡೆ ಮಾಡುವುದು ಸಂಬಂಧಪಟ್ಟಇಲಾಖೆಗಳು. ರಾಜ್ಯದಲ್ಲಿನ 224 ವಿಧಾನಸಭಾ ಸದಸ್ಯರು ಹಾಗೂ 75 ವಿಧಾನಪರಿಷತ್‌ ಸದಸ್ಯರನ್ನು ಸೇರಿಸಿದರೆ ಒಟ್ಟು 299 ಶಾಸಕರಿರುತ್ತಾರೆ. ವರ್ಷಕ್ಕೆ 598 ಕೋಟಿ ರು.ಗಳನ್ನು ಶಾಸಕರ ನಿಧಿಯಾಗಿ ನೀಡಲಾಗುತ್ತದೆ.

ಆದರೆ, ಎಲ್ಲ ಅನುದಾನವೂ ನಿಗದಿತ ಸಮಯಕ್ಕೆ ಬಳಕೆಯಾಗುವುದಿಲ್ಲ. ಅದು ಆಯಾ ಶಾಸಕರ ಮೇಲೆ ಅವಲಂಬನೆಯಾಗಿರುತ್ತದೆ. ಕೆಲವು ಶಾಸಕರು ಕ್ರಿಯಾಶೀಲವಾಗಿ ಆಯಾ ವರ್ಷದ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡುತ್ತಾರೆ. ಇನ್ನುಳಿದವರು ಕಾಮಗಾರಿಗಳ ಒತ್ತಡ ಮತ್ತಿತರ ಕಾರಣಕ್ಕಾಗಿ ವಿಳಂಬ ಮಾಡಿಕೊಳ್ಳುತ್ತಾರೆ. ಅಂಥವರ ನಿಧಿ ಬಳಕೆಯಾಗದೆ ಉಳಿಯುತ್ತದೆ. ಹೆಚ್ಚಿನ ಶಾಸಕರು ಬಳಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಈಗ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಸಂಬಂಧಪಟ್ಟವಿವಿಧ ಇಲಾಖೆಗಳಿಗೆ ಬರೆದಿರುವ ಪತ್ರದಲ್ಲಿ 2013-14ರಿಂದ 2016-17ರವರೆಗೆ ನಿಗದಿತ ಅನುದಾನವು ಖರ್ಚಾಗದೆ ಇರುವುದರಿಂದ ಸದರಿ ಕಾಮಗಾರಿಗಳಿಗೆ ನೀಡಿದ ಮಂಜೂರಾತಿ ರದ್ದುಪಡಿಸುವುದು ಅಗತ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ.

ಹಣ ಸಂಗ್ರಹಕ್ಕೆ ಹರಸಾಹಸ :  ಸಾಲಮನ್ನಾ ಮಾಡುವ ನಿಲುವಿಗೆ ಬದ್ಧರಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪ್ರಯತ್ನ ನಡೆಸಿದ್ದಾರೆ.

ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿರುವ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳಲ್ಲಿ ವಿವಿಧ ಬಾಬ್ತಿನಲ್ಲಿ ಖರ್ಚಾಗದೆ ಇರುವ ಅನುದಾನವನ್ನು ವಾಪಸ್‌ ಪಡೆಯಲು ಈ ಹಿಂದೆಯೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ ಪ್ರಕಾರ ಆರ್ಥಿಕ ಇಲಾಖೆಯ ಅಧಿಕಾರಿಗಳು ಖರ್ಚಾಗದೇ ಉಳಿದಿರುವ ಅನುದಾನ ವಾಪಸ್‌ ಪಡೆಯುವಲ್ಲಿ ನಿರತರಾಗಿದ್ದಾರೆ. ಅದಕ್ಕೆ ಬೇಕಾದ ಮಾಗೋರ್ಪಾಪಾಯಗಳನ್ನೂ ಹುಡುಕುತ್ತಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Follow Us:
Download App:
  • android
  • ios