ಬೆಂಗಳೂರು :  ಕೆಲಸ ಮಾಡಿಸಿಕೊಂಡು ಹಣ ನೀಡದೆ ವಂಚಿಸಿದ್ದ ನಿವೃತ್ತ ಅರಣ್ಯಾಧಿಕಾರಿಯ ಕಿರುಕುಳದಿಂದ ಬೇಸತ್ತ ಕುಟುಂಬ ವಿಧಾನಸೌಧದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅನಾಹುತ ತಪ್ಪಿಸಿ ಕುಟುಂಬವನ್ನು ವಶಕ್ಕೆ ಪಡೆದಿದ್ದಾರೆ.

ಬನ್ನೇರುಘಟ್ಟರಾಗಿಹಳ್ಳಿಯ ನಿವಾಸಿ ವಿಶ್ವನಾಥ್‌ ರೆಡ್ಡಿ(38), ಇವರ ಪತ್ನಿ ನಾಗರತ್ನಾ(36), ಪುತ್ರ ಸಂಜಯ್‌(14) ಆತ್ಮಹತ್ಯೆಗೆ ಯತ್ನಿಸಿದವರು. ನಿವೃತ್ತ ಅರಣ್ಯಾಧಿಕಾರಿ ಸತ್ಯನಾರಾಯಣ್‌ ಎಂಬುವರಿಂದ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು. ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶ್ವನಾಥ್‌ ಟ್ರ್ಯಾಕ್ಟರ್‌ ಮಾಲೀಕರಾಗಿದ್ದು, ವಸ್ತುಗಳನ್ನು ಸಾಗಿಸಲು ಟ್ರ್ಯಾಕ್ಟರ್‌ಅನ್ನು ಬಾಡಿಗೆಗೆ ಕೊಡುತ್ತಿದ್ದರು. ಈ ಹಿಂದೆ ಆರ್‌ಎಫ್‌ಓ ಸತ್ಯನಾರಾಯಣ್‌ 2008ರಲ್ಲಿ ಬನ್ನೇರುಘಟ್ಟಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ವಾಚ್‌ಟವರ್‌ ಕಟ್ಟಲು ನೀಲಗಿರಿ ಮರಗಳನ್ನು ಕಡಿದು ವಿಶ್ವನಾಥ್‌ ಅವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ಬೇರೆಡೆ ಸಾಗಿಸಲಾಗಿತ್ತು. ಮರಗಳನ್ನು ಸಾಗಿಸುತ್ತಿರುವ ವೇಳೆ ಟ್ರ್ಯಾಕ್ಟರ್‌ ಉರುಳಿ ಬಿದ್ದಿತ್ತು. ಟ್ರ್ಯಾಕ್ಟರ್‌ನಲ್ಲಿದ್ದ ಹರಿಪ್ರಸಾದ್‌ ಎಂಬಾತನಿಗೆ ಗಂಭೀರವಾಗಿ ಗಾಯವಾಗಿತ್ತು.

ಈ ವಿಚಾರ ಸತ್ಯನಾರಾಯಣ್‌ ಗಮನಕ್ಕೆ ಬಂದು ಘಟನೆ ವೇಳೆ ಮನೆಯಲ್ಲೇ ಇದ್ದ ವಿಶ್ವನಾಥ್‌ ರೆಡ್ಡಿಯನ್ನು ಕಚೇರಿಗೆ ಕರೆಸಿಕೊಂಡ ಸತ್ಯನಾರಾಯಣ್‌, ಟ್ರ್ಯಾಕ್ಟರ್‌ ಪಲ್ಟಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಗಾಯಗೊಂಡ ಹರಿಪ್ರಸಾದ್‌ಅನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹರಿಪ್ರಸಾದ್‌ ಚಿಕಿತ್ಸೆಗೆ 15 ಲಕ್ಷ ಖರ್ಚಾಗಿತ್ತು. ಚಿಕಿತ್ಸೆಗೆ ತುರ್ತು ಲಕ್ಷ ಬೇಕಾಗಿದ್ದ ಕಾರಣ, ‘ಸದ್ಯ ಚಿಕಿತ್ಸಾ ವೆಚ್ಚವನ್ನು ನನ್ನ ಹೆಸರಿನಲ್ಲಿ ಅವರಿಗೆ ಕೊಡು, ಆ ಮೇಲೆ ಆ ಹಣವನ್ನು ನಿನಗೆ ಕೊಡುತ್ತೇನೆ’ ಎಂದು ಸತ್ಯನಾರಾಯಣ್‌ ಹೇಳಿದ್ದರು. ಸತ್ಯನಾರಾಯಣ್‌ ಮಾತು ನಂಬಿದ ವಿಶ್ವನಾಥ್‌ ತಮ್ಮ ಜಮೀನು ಮಾರಾಟ ಮಾಡಿ 15 ಲಕ್ಷಗಳನ್ನು ನೀಡಿದ್ದರು. ಆದರೆ ಇಲ್ಲಿಯವರೆಗೂ ಆ ಹಣವನ್ನು ಸತ್ಯನಾರಾಯಣ್‌ ವಾಪಸ್‌ ನೀಡಿಲ್ಲ. ವಾಪಾಸ್‌ ಕೇಳಲು ಹೋದರೆ ಬೆದರಿಸುತ್ತಿದ್ದಾರೆ ಎಂದು ಕುಟುಂಬ ವಿಚಾರಣೆ ವೇಳೆ ಪೊಲೀಸರ ಬಳಿ ಅಳಲು ತೋಡಿಕೊಂಡಿದೆ.

ವಿಶ್ವನಾಥ್‌ ಅವರು ಕುಟುಂಬ ಸಮೇತ ಶುಕ್ರವಾರ ಬೆಳಗ್ಗೆ ವಿಧಾನಸೌಧದ ಅಂಬೇಡ್ಕರ್‌ ಪ್ರತಿಮೆ ಎದುರು ಸೀಮೆಣ್ಣೆ ಬಾಟಲಿ ಸಮೇತ ಕಾಣಿಸಿಕೊಂಡಿತ್ತು. ಕುಟುಂಬ ಸೀಮೆಣ್ಣೆ ಬಾಟಲಿ ಹಿಡಿದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸೀಮೆಣ್ಣೆ ಬಾಟಲಿ ಕಸಿದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಧಿಕಾರಿಯ ಕಿರುಕುಳದ ಬಗ್ಗೆ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.