ನಾನು ನಾಳೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಸೋತಿರುವ ನಾನು ಮತ್ತೊಂದು ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಹಾಗಾಗಿ ಇಷ್ಟುಬೇಗ ಮನೆ ಕಡೆ ಮುಖ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. 

ಬೆಂಗಳೂರು : ರಾಜಕೀಯ ಯಾವತ್ತೂ ನಿಂತ ನೀರಲ್ಲ, ಅದು ಹರಿಯುವ ನೀರು. ಈಗ ಕೊಡಗು, ಕೇರಳದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಕಾವೇರಿ ನೀರಿನ ರಭಸ ಹೆಚ್ಚಾಗಿದ್ದು, ಹೆಚ್ಚು ನೀರು ಹರಿದಿರುವ ಕಾರಣ ಬದಲಾವಣೆ ಬೇಗ ಆಗಿದೆ. ಹಾಗಾಗಿ ನಾನು ನಾಳೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಲ್ಲದೇ, ಒಂದು ಕ್ಷೇತ್ರದಲ್ಲಿ ಸೋತಿರುವ ನಾನು ಮತ್ತೊಂದು ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಹಾಗಾಗಿ ಇಷ್ಟುಬೇಗ ಮನೆ ಕಡೆ ಮುಖ ಮಾಡುವ ಪ್ರಶ್ನೆಯೇ ಇಲ್ಲ. ಬಾದಾಮಿ ಕ್ಷೇತ್ರದ ಜನತೆ ನನಗೆ ಬಾದಾಮಿ ಹಾಲು ಕುಡಿಸಿದ್ದಾರೆ. ಇದರಿಂದ ನನಗೆ ಈಗ ಶಕ್ತಿ ಬಂದಿದೆ. ಮುಖ್ಯಮಂತ್ರಿಯಾಗಿ ಮತ್ತೆ ಸಾಕಷ್ಟುಭಾಗ್ಯಗಳನ್ನು ಮಹಾಜನತೆಗೆ ನೀಡೇ ನೀಡುತ್ತೇನೆ. ಇದಕ್ಕೆ ನನಗೆ ಸ್ವತಃ ಬಿಜೆಪಿಯವರು ತುಂಬು ಹೃದಯದಿಂದ ಸಹಕಾರ ನೀಡಲಿದ್ದಾರೆ ಎಂದು ಸುಳ್‌ ಸುದ್ದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಿದ್ದರಾಮಯ್ಯ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

[ಸುಳ್ಳು ಸುದ್ದಿ]