Asianet Suvarna News Asianet Suvarna News

ಖೋಟಾನೋಟು: ಕರ್ನಾಟಕ ನಂ.4

  • ನಕಲಿ ನೋಟು ಜಪ್ತಿಯಲ್ಲಿ ಗುಜರಾತ್ ದೇಶದಲ್ಲಿ ನಂ.1, ಆಂಧ್ರ ನಂ.2: ಕ್ರೈಂ ಬ್ಯೂರೋ ವರದಿ
  • ದೇಶಾದ್ಯಂತ ₹15.92 ಕೋಟಿಯ ಕಳ್ಳನೋಟು ಜಪ್ತಿ
  • ಕರ್ನಾಟಕದಲ್ಲಿ ಸಿಕ್ಕಿದ್ದು ₹80 ಲಕ್ಷ
Fake Currency Karnataka in 4th Place

ನವದೆಹಲಿ: ಖೋಟಾನೋಟು ಜಪ್ತಿ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ 4ನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ವಿವಿಧ ಪ್ರಕಾರದ ಅಪರಾಧ ಪ್ರಕರಣಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ.

ದೇಶದೆಲ್ಲೆಡೆ ಈ ವರ್ಷ ಈವರೆಗೆ 15.92 ಕೋಟಿ ರು. ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ರಾಜ್ಯಗಳಲ್ಲಿ 10.12 ಕೋಟಿ ರು. ಮೌಲ್ಯದ ನೋಟುಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 5.80 ರು. ಮೌಲ್ಯದ ಕರೆನ್ಸಿಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಒಟ್ಟಾರೆ 1079 ಎಫ್‌ಐಆರ್‌ಗಳನ್ನು ದಾಖಲು ಮಾಡಿಕೊಂಡು 1067 ಜನರನ್ನು ಬಂಧಿಸಲಾಗಿದೆ ಎಂದು ಎನ್‌ಸಿಆರ್‌ಬಿ ಹೇಳಿದೆ.

ರಾಜ್ಯವಾರು ಖೋಟಾ ನೋಟು ಜಪ್ತಿ ಪ್ರಮಾಣವನ್ನು ಗಮನಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಮೊದಲ ಸ್ಥಾನದಲ್ಲಿದೆ.  ಬಾಂಗ್ಲಾದೇಶದಿಂದ ವ್ಯಾಪಕವಾಗಿ ಖೋಟಾ ನೋಟು ಸಾಗಣೆ ಆಗಲ್ಪಡುವ ಪ.ಬಂಗಾಳ 2ನೇ ಸ್ಥಾನ, ಆಂಧ್ರಪ್ರದೇಶ 3, ಕರ್ನಾಟಕ 4 ಹಾಗೂ ತೆಲಂಗಾಣ 5ನೇ ಸ್ಥಾನ ಪಡೆದಿವೆ. 

ಗುಜರಾತ್‌ನಲ್ಲಿ 2.37 ಕೋಟಿ ರು. ಮೌಲ್ಯದ ನಕಲಿ ನೋಟು, ಪಶ್ಚಿಮ ಬಂಗಾಳದಲ್ಲಿ 2.33 ಕೋಟಿ ರು., ಆಂಧ್ರಪ್ರದೇಶದಲ್ಲಿ 92.80 ಲಕ್ಷ ರು. ಕರ್ನಾಟಕದಲ್ಲಿ 80.09 ಲಕ್ಷ ರು. ಹಾಗೂ ತೆಲಂಗಾಣದಲ್ಲಿ 76 ಲಕ್ಷ ರು. ಮೌಲ್ಯದ ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಮಹಾನಗರಗಳಲ್ಲಿ ಬೆಂಗಳೂರು ನಂ.3

ದೇಶದ ಪ್ರಮುಖ ಮಹಾನಗರಗಳಲ್ಲಿ ಖೋಟಾನೋಟು ಜಪ್ತಿಯಾದ ಪ್ರಕರಣಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದಿದೆ. ಮಹಾನಗರಗಳಲ್ಲಿ 294 ಪ್ರಕರಣಗಳು ದಾಖಲಾಗಿವೆ. ಮೊದಲ ಸ್ಥಾನದಲ್ಲಿ ದಿಲ್ಲಿ (76 ಕೇಸು), ನಂತರದ ಸ್ಥಾನಗಳಲ್ಲಿ ಚೆನ್ನೈ (45), ಬೆಂಗಳೂರು (39) ಹಾಗೂ ಹೈದರಾಬಾದ್ (23 ಪ್ರಕರಣಗಳು) ಇವೆ.

Follow Us:
Download App:
  • android
  • ios