ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಹೀಗಿರುವಾಗ ನಿಮ್ಮ ವಾಹನದ ಪೆಟ್ರೋಲ್ ಟ್ಯಾಂಕ್ ಅಂಚಿನವರೆಗೂ ಪೆಟ್ರೋಲ್ ಅಥವಾ ಡೀಸೆಲ್ ತುಂಬದಿರಿ. ಇದರಿಂದ ವಾಹನಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಟ್ಟಾರೆ ಸಂದೇಶ ಹೀಗಿದೆ; ‘ಭಾರತೀಯ ತೈಲ ನಿಗಮದಿಂದ ಎಚ್ಚರಿಕೆಯ ಸಂದೇಶ. ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ವಾಹನದಲ್ಲಿ ತುಂಬಿ ತುಳುಕುವಷ್ಟು ಪೆಟ್ರೋಲ್ ತುಂಬಿಸಬೇಡಿ. ಇದರಿಂದ ವಾಹನಗಳು ಸ್ಫೋಟಗೊಳ್ಳಬಹುದು. ದಯವಿಟ್ಟು ಅರ್ಧ ಟ್ಯಾಂಕ್ ಮಾತ್ರ ತುಂಬಿಸಿ ಗಾಳಿಯಾಡಲು ಬಿಡಿ. ಅಳತೆ ಮೀರಿ ಪೆಟ್ರೋಲ್ ತುಂಬಿಸಿದ್ದರಿಂದ ಇತ್ತೀಚೆಗೆ 5 ವಾಹನಗಳು ಸ್ಫೋಟಗೊಂಡಿದ್ದು ವರದಿಯಾಗಿದೆ.

ದಿನಕ್ಕೊಂದು ಬಾರಿಯಾದರೂ ಪೆಟ್ರೋಲ್ ಟ್ಯಾಂಕ್ ತೆರೆದು ಗ್ಯಾಸ್ ಹೊರಕಳಿಸಿ’ ಎಂದು ಹೇಳಲಾಗಿದೆ. ಸದ್ಯ ಈ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಸುದ್ದಿ ನಿಜವೇ ಎಂದು ಆಲ್ಟ್ ನ್ಯೂಸ್ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ 2015 ರಿಂದಲೇ ಈ ಸಂದೇಶ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.

ಅಲ್ಲದೆ ಭಾರತೀಯ ತೈಲ ನಿಗಮವೂ ಇದೊಂದು ವದಂತಿಯಷ್ಟೇ ಎಂದು ಸ್ಪಷ್ಟೀಕರಣ ನೀಡಿದೆ. ರಾಜ್ಯ ಮಾಲಿಕತ್ವದ ಆಯಿಲ್ ಮತ್ತು ಗ್ಯಾಸ್ ಕಂಪನಿ ಈ ಬಗ್ಗೆ 2018 ರಲ್ಲಿ ಟ್ವೀಟರ್‌ನಲ್ಲಿ ಸ್ಪಷ್ಟೀಕರಣ ನೀಡಿದೆ. ಜೊತೆಗೆ ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸುವುದರಿಂದ ಯಾವುದೇ ತೊಂದರೆ ಇಲ್ಲವೆಂಬ ಅಭಯವನ್ನೂ ನೀಡಿದೆ.

- ವೈರಲ್ ಚೆಕ್