ಉತ್ತರ ಕೊರಿಯಾ ಸುಪ್ರೀಂ ಲೀಡರ್‌ ಕಿಮ್‌-ಜಾಂಗ್‌-ಉನ್‌ ಭ್ರಷ್ಟಅಧಿಕಾರಿಗಳಿಗೆ ಯಾವ ರೀತಿಯ ಶಿಕ್ಷೆ ನೀಡುತ್ತಿದ್ದಾರೆ ನೋಡಿ ಎಂದು ಒಕ್ಕಣೆ ಬರೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಕಿಮ್‌ ವ್ಯಕ್ತಿಯೊಬ್ಬರೊಂದಿಗೆ ಸ್ವಲ್ಪ ದೂರ ನಡೆದು ಹೋಗುತ್ತಾರೆ. ಆಗ ತತಕ್ಷಣ ಆ ವ್ಯಕ್ತಿ ನಿಂತಿರುವ ಜಾಗದಲ್ಲಿ ಸ್ವಯಂಪ್ರೇರಿತವಾಗಿ ಬಾಗಿಲು ತೆರೆದು ವ್ಯಕ್ತಿ ಗುಂಡಿಯೊಳಕ್ಕೆ ಬೀಳುತ್ತಾರೆ. ಮತ್ತೆ ಆ ಬಾಗಿಲು ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ.

ಈ ವಿಡಿಯೋವನ್ನು ಗೌರವ್‌ ಕೆ.ಆರ್‌ ಮಿಶ್ರಾ ಎಂಬುವವರು ಟ್ವೀಟ್‌ ಮಾಡಿ, ‘ದಕ್ಷಿಣ ಕೊರಿಯಾ ಅಧ್ಯಕ್ಷ ಕಿಮ್‌ ಭ್ರಷ್ಟಅಧಿಕಾರಿಯೊಬ್ಬರಿಗೆ ಮಾಧ್ಯಮದವರ ಉಪಸ್ಥಿತಿಯಲ್ಲೇ ಮರಣ ದಂಡನೆ ವಿಧಿಸಿದರು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಈ ರೀತಿ ಕಿಮ್‌ ಭ್ರಷ್ಟಅಧಿಕಾರಿಗಳಿಗೆ ಮರಣ ದಂಡನೆ ವಿಧಿಸುತ್ತಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟವಾಗಿದೆ. ಆಲ್ಟ್‌ ನ್ಯೂಸ್‌ ಸುದ್ದಿಸಂಸ್ಥೆಯು ಈ ಬಗ್ಗೆ ತನಿಖೆಗೆ ಮುಂದಾದಾಗ ವೈರಲ್‌ ಆಗಿರುವ ವಿಡಿಯೋವು ಎಡಿಟ್‌ ಮಾಡಿದ ವಿಡಿಯೋ ಎಂದು ತಿಳಿದುಬಂದಿದೆ.

ಮೂಲ ವಿಡಿಯೋ ಐತಿಹಾಸಿಕ ಘಟನೆಯೊಂದನ್ನು ಪ್ರಸ್ತುತ ಪಡಿಸುತ್ತದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೋನ್‌-ಜಾಯ್‌-ಇನ್‌ ಮತ್ತು ಉತ್ತರ ಕೊರಿಯಾ ಅಧ್ಯಕ ಕಿಮ್‌ ಭೇಟಿಯಾದ ಐತಿಹಾಸಿಕ ಕ್ಷಣದ ಸಂದರ್ಭವದು. ಆ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್