ಆ್ಯಪಲ್‌ ಮರಗಳನ್ನು ಕಡಿದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ‘ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್‌ 370ಯನ್ನು ಭಾರತ ಸರ್ಕಾರ ರದ್ದು ಮಾಡಿದ ಬಳಿಕ ಮೋದಿ ಸರ್ಕಾರ ದೌರ್ಜನ್ಯ ಮಾಡಲು ಆರಂಭಿಸಿದೆ.

ಮುಗ್ಧ ಕಾಶ್ಮೀರಿಗಳಿಗೆ ಸೇರಿದ್ದ ಆ್ಯಪಲ್‌ ಮರಗಳನ್ನು ನಿರ್ದಯವಾಗಿ ಕಡಿದುಹಾಕುತ್ತಿದೆ. ಹೆಚ್ಚೆಚ್ಚು ಬಾರಿ ಶೇರ್‌ ಮಾಡಿ, ಹೆಚ್ಚು ಜನರಿಗೆ ತಲುಪಿಸಿ’ ಎಂದು ಉರ್ದುವಿನಲ್ಲಿ ಒಕ್ಕಣೆ ಬರೆಯಲಾಗಿದೆ. ಬಳಿಕ ಇದು ಟ್ವೀಟರ್‌ನಲ್ಲೂ ಶೇರ್‌ ಆಗಿದೆ.

ಆದರೆ ನಿಜಕ್ಕೂ ಕಾಶ್ಮೀರಲ್ಲಿ ಆ್ಯಪಲ್‌ ಮರಗಳನ್ನು ಕೇಂದ್ರ ಸರ್ಕಾರ ಕಡಿಸುತ್ತಿದೆಯೇ ಎಂದು ಪರಿಸೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಈ ವಿಡಿಯೋ ಕಾಶ್ಮೀರದ್ದೇ ಅಲ್ಲ, ಹಿಮಾಚಲ ಪ್ರದೇಶದ್ದು ಎಂದು ತಿಳಿದುಬಂದಿದೆ. ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿರುವ ಜನ ಹಿಮಾಚಲ ಪ್ರದೇಶದಲ್ಲಿ ಮಾತನಾಡುವ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

ಹಾಗೆಯೇ ಇದರಲ್ಲಿರುವ ಇಬ್ಬರು ವ್ಯಕ್ತಿಗಳು ಹಿಮಾಚಲ ಪ್ರದೇಶದಲ್ಲಿ ಧರಿಸುವ ಟೋಪಿ ಧರಿಸಿದ್ದಾರೆ. ಯುಟ್ಯೂಬ್‌ನಲ್ಲಿಯೂ ಇದೇ ವಿಡಿಯೋ ಕಳೆದ ಜುಲೈನಲ್ಲಿ ಅಪ್‌ಲೋಡ್‌ ಆಗಿದೆ. ಅತಿಕ್ರಮಣ ಮಾಡಿ ಅರಣ್ಯದಲ್ಲಿ ಬೆಳೆದಿದ್ದ ಆ್ಯಪಲ್‌ ಮರಗಳನ್ನು ಕತ್ತರಿಸುವಂತೆ ಅಲ್ಲಿನ ಹೈಕೋರ್ಟ್‌ ಆದೇಶ ನೀಡಿತ್ತು. ಅದರಂತೆ ಸಾವಿರಾರು ಮರಗಳನ್ನು ಕಡಿದುರುಳಿಸಲಾಗಿತ್ತು. ಇದೇ ವಿಡಿಯೋ ಪೋಸ್ಟ್‌ ಮಾಡಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್