ಹೈದರಾಬಾದ್‌ನ ಘೋಷ್‌ಮಹಲ್‌ ಕ್ಷೇತ್ರದ ಬಿಜೆಪಿ ಶಾಸಕ, ಕಟ್ಟರ್‌ ಹಿಂದುತ್ವವಾದಿ ನಾಯಕ ಟಿ.ರಾಜಾ ಸಿಂಗ್‌ ಅವರ ತಂಗಿ ಮಾಯಾದೇವಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳಂತೆ. ಮಿಯಾಭಾಯಿ ಸರ್ಕಾಸಮ್‌ ಎಂಬ ಫೇಸ್‌ಬುಕ್‌ ಪುಟದಲ್ಲಿ ಈ ಬಗ್ಗೆ ‘ದಿ ನ್ಯೂಸ್‌ ಮಿನಿಟ್‌’ ವೆಬ್‌ಸೈಟಿನಲ್ಲಿ ಪ್ರಕಟವಾಗಿದ್ದೆನ್ನಲಾದ ಸುದ್ದಿಯನ್ನು ಪೋಸ್ಟ್‌ ಮಾಡಲಾಗಿದೆ.

ಅದರಲ್ಲಿ ‘ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ತಮಗೆ ಬೇಕಾದ ಧರ್ಮವನ್ನು ಆಯ್ದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಯಾರೂ ಯಾರನ್ನೂ ಬಲವಂತ ಮಾಡುವಂತಿಲ್ಲ. ನಾನು ಇಸ್ಲಾಂ ಸ್ವೀಕರಿಸಿದ್ದರಿಂದ ನನ್ನ ಅಣ್ಣ ನನ್ನಿಂದ ದೂರವಾಗಿದ್ದಾನೆ’ ಎಂದು ಆಕೆಯ ಹೇಳಿಕೆಯೂ ಇದೆ. ಈ ಪೋಸ್ಟನ್ನು ಪ್ರಕಟಿಸಿದ ಮಿಯಾಭಾಯಿ ಸರ್ಕಾಸಮ್‌ ಪೇಜಿನ ಅಡ್ಮಿನ್‌, ‘ರಾಜಾ ಸಿಂಗ್‌ರ ತಂಗಿ ಇಸ್ಲಾಂ ಸ್ವೀಕರಿಸಿದ್ದಾಳೆ.

ರಾಜಕೀಯಕ್ಕಾಗಿ ನೀವು ಅತಿಯಾಗಿ ದ್ವೇಷ ಹರಡಿದರೆ ಹೀಗೇ ಆಗುತ್ತದೆ. ದೇವರು ನಿಮ್ಮ ಆಪ್ತರಿಂದಲೇ ನಿಮಗೆ ಪಾಠ ಕಲಿಸುತ್ತಾನೆ. ರಾಜಾ ಸಿಂಗ್‌, ಈಗಲಾದರೂ ಸುಧಾರಿಸಿಕೋ. ಎಲ್ಲಿಯವರೆಗೆ ದ್ವೇಷದಲ್ಲಿ ಬದುಕುತ್ತೀಯಾ?’ ಎಂದು ಬರೆದಿದ್ದಾರೆ. ಈ ಪೋಸ್ಟ್‌ ಸಾವಿರಾರು ಬಾರಿ ಶೇರ್‌ ಆಗಿದೆ.

ಆದರೆ, ಈ ಸುದ್ದಿಯ ಆಳಕ್ಕಿಳಿದಾಗ ಫೋಟೋದಲ್ಲಿರುವುದು ಶಾಸಕ ರಾಜಾ ಸಿಂಗ್‌ರ ತಂಗಿ ಅಲ್ಲವೆಂದೂ, ಅವರಿಗೆ ತಂಗಿಯೇ ಇಲ್ಲವೆಂದೂ ಗೊತ್ತಾಗಿದೆ. ತನಗೆ ತಂಗಿಯಿಲ್ಲ ಎಂದು ರಾಜಾ ಸಿಂಗ್‌ ಕೂಡ ಹೇಳಿದ್ದಾರೆ. ಇದು 2017ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ ಕೇರಳದ ಕಾಸರಗೋಡಿನ ಅತಿರಾ ಎನ್ನುವವಳ ಫೋಟೋ. ಆಕೆ ಆಯೇಷಾ ಎಂದು ಹೆಸರು ಬದಲಿಸಿಕೊಂಡಿದ್ದಳು. ನಂತರ ಮತ್ತೆ ಹಿಂದು ಧರ್ಮಕ್ಕೆ ಮರುಮತಾಂತರ ಆಗಿದ್ದಳು. ಏಷ್ಯಾನೆಟ್‌ ನ್ಯೂಸ್‌ ಆಕೆಯ ಸಂದರ್ಶನವನ್ನು ಯೂಟ್ಯೂಬ್‌ನಲ್ಲಿ ತನ್ನ ವಾಟರ್‌ಮಾರ್ಕ್ನೊಂದಿಗೆ ಪ್ರಕಟಿಸಿತ್ತು ಎಂದೂ ತಿಳಿದುಬಂದಿದೆ.

- ವೈರಲ್ ಚೆಕ್