ರಿಲಯನ್ಸ್‌ ಜಿಯೋ ಹೆಸರಲ್ಲಿ ಹೊಸ ಹೊಸ ಸುಳ್ಳು ಸುದ್ದಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಸದ್ಯ ಜಿಯೋ 3 ತಿಂಗಳಿಗೆ ಅನ್ವಯವಾಗುವಂತೆ 399 ರು.ಗಳ ಫ್ರೀ ರೀಚಾರ್ಜ್ ಮಾಡುತ್ತಿದೆ ಎನ್ನುವ ಸಂದೇಶ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.

ಭಾರತದ ನಂ.1 ಹಾಗೂ ಜಗತ್ತಿನ ನಂ.2 ಸ್ಥಾನ ಪಡೆದಿರುವ ಜಿಯೋ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆ ನೀಡುತ್ತಿದೆ. 3 ತಿಂಗಳಿಗೆ ಅನ್ವಯವಾಗುವಂತೆ 399 ರು.ಗಳ ಫ್ರೀ ರೀಚಾರ್ಜ್ ಮಾಡುತ್ತಿದೆ. ಇದರಿಂದ 3 ತಿಂಗಳು ಉಚಿತ ಕರೆ ಮತ್ತು ದಿನಕ್ಕೆ 2 ಜಿಬಿ ಡೇಟಾ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಹಲವಾರು ಯುಟ್ಯೂಬ್‌ ವಿಡಿಯೋಗಳೂ ಹರಿದಾಡುತ್ತಿವೆ.

ಆದರೆ ನಿಜಕ್ಕೂ ಜಿಯೋ ಇಂಥದ್ದೊಂದು ಆಫರ್‌ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಸಾಮಾನ್ಯವಾಗಿ ಜಿಯೋನಂಥಹ ದೊಡ್ಡ ಕಂಪನಿಗಳು ಆಫರ್‌ ನೀಡಿದ್ದರೆ ಅದರ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತವೆ. ಅಥವಾ ಮಾಧ್ಯಮಗಳಲ್ಲಿ ಅದು ಪ್ರಕಟವಾಗುತ್ತದೆ. ಆದರೆ 399 ಫ್ರೀ ರೀಚಾಜ್‌ರ್‍ ಬಗ್ಗೆ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ.

ಅಲ್ಲದೆ ವೈರಲ್‌ ಆಗಿರುವ ಸಂದೇಶದೊಂದಿಗೆ ಲಗತ್ತಿಸಲಾದ ವೆಬ್‌ಸೈಟ್‌ ನಕಲಿ. ಇಂಥ ಸುಳ್ಳು ಸುದ್ದಿಗಳನ್ನು ಹರಡಿ ಜಾಹೀರಾತಿನ ಮೂಲಕ ಹಣ ಮಾಡಲೆಂದೇ ಅಥವಾ ಜನರ ವೈಯಕ್ತಿಕ ಮಾಹಿತಿ ಕದಿಯಲೆಂದೇ ಇಂತಹ ವೆಬ್‌ಸೈಟ್‌ಗಳನ್ನು ಸೃಷ್ಟಿಸಲಾಗಿರುತ್ತದೆ. ಜೊತೆಗೆ ಇಂಥ ನಕಲಿ ವೆಬ್‌ಸೈಟ್‌ಗಳು ಈ ಸಂದೇಶವನ್ನು 10 ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಕಳಿಸುವುದು ಕಡ್ಡಾಯ ಎನ್ನುತ್ತವೆ. ಅಲ್ಲಿಗೆ ಇದು ಸುಳ್ಳು ಸುದ್ದಿ ಎಂದು ತಿಳಿಯಬೇಕು.

- ವೈರಲ್ ಚೆಕ್