ಡೋಮಿನೋಸ್‌ ಪಿಜ್ಜಾ ತನ್ನ 50ನೇ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರಿಗೆ ಬಂಪರ್‌ ಆಫರ್‌ ನೀಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡೋಮಿನೋಸ್‌ ಹೆಸರಿನ ಫೇಸ್‌ಬುಕ್‌ ಪೇಜ್‌, ‘ಡೋಮಿನೋಸ್‌ಗೆ ಸದ್ಯ 50 ವರ್ಷ!

ಈ ಸಂದೇಶವನ್ನು ನಾಳೆ ಸಂಜೆ 7ರ ಒಳಗೆ ಶೇರ್‌ ಮಾಡಿದಲ್ಲಿ ದೊಡ್ಡ ಗಾತ್ರದ ಪಿಜ್ಜಾ ಪಡೆಯಲು 2 ಕೂಪನ್‌ ನೀಡಲಾಗುವುದು-ಡೋಮಿನೋಸ್‌.( 24ಗಂಟೆಯೊಳಗೆ ಇದನ್ನು ಶೇರ್‌ ಮಾಡಿ, ಕೂಪನನ್ನು ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಕಳಿಸಲಾಗುವುದು)’ ಎಂದು ಬರೆದು ಪೋಸ್ಟ್‌ ಮಾಡಿದೆ. ಇದು 6300ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ನೆಟ್ಟಿಗರು, ಕಾಮೆಂಟ್‌ನಲ್ಲಿ ಡೋಮಿನೋಸ್‌ಗೆ ಬರ್ತಡೇ ವಿಶ್‌ ಕೂಡ ಮಾಡಿದ್ದಾರೆ.

ಆದರೆ ನಿಜಕ್ಕೂ ಡೊಮಿನೋಸ ತನ್ನ ಗ್ರಾಹಕರಿಗೆ ಇಂಥದ್ದೊಂದು ಆಫರ್‌ ನೀಡಿದೆಯೇ ಎಂದು ಇಂಡಿಯಾ ಟುಡೇ ಫ್ಯಾಕ್ಟ್ಚೆಕ್‌ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಡೋಮಿನೋಸ್‌ ಪಿಜ್ಜಾ ಸಂಸ್ಥೆಯು ಅಮೆರಿಕದಲ್ಲಿ 1960ರಲ್ಲಿ ಅಸ್ತಿತ್ವಕ್ಕೆ ಬಂತು. ಅಲ್ಲಿಗೆ ಸಂಸ್ಥೆ ಸ್ಥಾಪನೆಯಾಗಿ 50 ವರ್ಷ ಎಂಬುದು ಸುಳ್ಳು. ಅಲ್ಲದೆ ಈ ಸಂದೇಶವನ್ನು ಪೋಸ್ಟ್‌ ಮಾಡಿರುವ ಪೇಜ್‌ ಡೋಮಿನೋಸ್‌ನ ಅಧಿಕೃತ ಫೇಸ್‌ಬುಕ್‌ ಪೇಜ್‌ ಅಲ್ಲ.

ನಕಲಿ ಸುದ್ದಿ ಹರಡಲೆಂದೇ ಇತ್ತೀಚೆಗೆ ಈ ಪೇಜ್‌ ಸೃಷ್ಟಿಸಲಾಗಿದೆ. ಡೋಮಿನೋಸ್‌ನ ಅಧಿಕೃತ ಪುಟದಲ್ಲಿ ಪರಿಶೀಲಿಸಿದಾಗ ಈ ರೀತಿಯ ಯಾವುದೇ ಆಫರ್‌ಗಳೂ ಕಂಡುಬಂದಿಲ್ಲ. ಸಾಮಾನ್ಯವಾಗಿ ಇಂಥ ಯಾವುದೇ ಆಫರ್‌ ನೀಡಿದಲ್ಲಿ ಡೋಮಿನೋಸ್‌ ತನ್ನ ಅಧಿಕೃತ ಟ್ವೀಟರ್‌ ಮತ್ತು ಫೇಸ್‌ಬುಕ್‌ ಅದನ್ನು ಪುಟದಲ್ಲಿ ಉಲ್ಲೇಖಿಸುತ್ತದೆ. ಜೊತೆಗೆ ಡೋಮಿನೋಸ್‌ ಕಸ್ಟಮರ್‌ ಕೇರ್‌ ಕೂಡ ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. 

- ವೈರಲ್ ಚೆಕ್