ನೂರಾರು ಸತ್ತ ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಕೊಂಡು ಒಂದೆಡೆ ಸುರಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

‘ರವೀಶ್‌ ಕುಮಾರ್‌-ದಿ ಫಿಯರ್‌ಲೆಸ್‌ ರಿಪೋರ್ಟರ್‌’ ಎಂಬ ಫೇಸ್‌ಬುಕ್‌ ಪೇಜ್‌ ಈ ಪೋಟೋವನ್ನು ಪೋಸ್ಟ್‌ ಮಾಡಿ, ‘ಮೇವಿಲ್ಲದೆ ರಾಜಸ್ಥಾನದಲ್ಲಿ ನೂರಾರು ಜಾನುವಾರುಗಳು ಮೃತಪಟ್ಟಿವೆ. ಇಲ್ಲಿ ಗೋವಿನ ಹೆಸರಲ್ಲಿ ವೋಟು ಕೇಳುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.

ಈ ಪೋಸ್ಟ್‌ ಸದ್ಯ ವೈರಲ್‌ ಆಗುತ್ತಿದೆ. ಆದರೆ ನಿಜಕ್ಕೂ ರಾಜಸ್ಥಾನದಲ್ಲಿ ಮೇವಿಲ್ಲದೆ ಇಷ್ಟೊಂದು ಜಾನುವಾರುಗಳು ಮೃತಪಟ್ಟವೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ, ಈ ಫೋಟೋ ರಾಜಸ್ಥಾನದ್ದಲ್ಲ, ಬದಲಾಗಿ ಕೀನ್ಯಾ ದೇಶದ ಫೋಟೋ ಎಂದು ತಿಳಿದುಬಂದಿದೆ.

ಈ ಪೋಸ್ಟ್‌ ಕಳೆದ ವರ್ಷದಿಂದ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದುವರೆಗೂ ಬರೋಬ್ಬರಿ 78,000 ಬಾರಿ ಶೇರ್‌ ಆಗಿದೆ. ಆದರೆ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ವಾಸ್ತವ ಬಯಲಾಗಿದೆ. 2014ರಲ್ಲಿ ‘ಈಟಿಂಗ್‌ ಮೈ ಎಥಿಕ್ಸ್‌’ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ವೈರಲ್‌ ಆಗಿರುವ ಫೋಟೋವೇ ಇದ್ದು, ಅದರಲ್ಲಿ, ‘ ಕೀನ್ಯಾ ಮೀಟ್‌ ಕಮಿಷನ್‌ನಲ್ಲಿ ಮೇವಿಲ್ಲದೆ ಮೃತಪಟ್ಟನೂರಾರು ದನಕರುಗಳನ್ನು ಅಥಿ ನದಿಯ ಬಳಿ ಹೂಳಲಾಯಿತು’ ಎಂದು ಶೀರ್ಷಿಕೆ ಬರೆಯಲಾಗಿದೆ. ಈ ಘಟನೆ 2009ರಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಆಫ್ರಿಕಾದ ಅನೇಕ ಸುದ್ದಿ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ.

- ವೈರಲ್ ಚೆಕ್