ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಲಿತರ ಮತಗಳನ್ನು ಸೆಳೆವ ಉದ್ದೇಶದಿಂದ ಭಾನುವಾರ ಬಿಜೆಪಿ ‘ಕಿಚಡಿ’ ತಂತ್ರದ ಮೊರೆ ಹೋಯಿತು. ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ದಿಲ್ಲಿ ಬಿಜೆಪಿ ಘಟಕ ಆಯೋಜಿಸಿದ್ದ ‘ಭೀಮ ಮಹಾಸಂಗಮ’ ದಲಿತರ ರಾರ‍ಯಲಿಯಲ್ಲಿ 5 ಸಾವಿರ ಕೇಜಿ ತೂಕದ ‘ಸಾಮರತೆ ಕಿಚಡಿ’ ತಯಾರಿಸಿ, ಸಮಾವೇಶಕ್ಕೆ ಆಗಮಿಸಿದ್ದ ದಲಿತ ಕಾರ್ಯಕರ್ತರಿಗೆ, ಸಭಿಕರಿಗೆ ಉಣಬಡಿಸಲಾಯಿತು.

ವಿಶೇಷವೆಂದರ ದಲಿತರಿಂದ ಸಂಗ್ರಹಿಸಲಾದ ಅಕ್ಕಿ, ಬೇಳೆಕಾಳುಗಳನ್ನು ಬಳಸಿ ಬರೋಬ್ಬರಿ 5000 ಕೆ.ಜಿ. ತೂಕದ ಕಿಚಡಿ ತಯಾರಿಸಲಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ. ಇದು ದಾಖಲೆ ನಿರ್ಮಿಸುವ ಉದ್ದೇಶವನ್ನೂ ಹೊಂದಿತ್ತು.

ಈ ಕಿಚಡಿ ತಯಾರಿಕೆಗೆ 400 ಕೇಜಿ ಅಕ್ಕಿ, 100 ಕೇಜಿ ಬೇಳೆ, 350 ಕೇಜಿ ತರಕಾರಿ, 1000 ಕೇಜಿ ದೇಸಿ ತುಪ್ಪ, 100 ಲೀ. ಎಣ್ಣೆ, 2500 ಲೀ. ನೀರು, 250 ಕೇಜಿ ಮಸಾಲೆ ಪದಾರ್ಥಗಳನ್ನು ಬಳಸಲಾಗಿದೆ ಎಂದು ಅಡುಗೆಭಟ್ಟರೊಬ್ಬರು ಹೇಳಿದ್ದಾರೆ. 2 ಲಕ್ಷ ದಲಿತರ ಮನೆಗಳಿಂದ ಈ ಪದಾರ್ಥಗಳನ್ನು ಬಿಜೆಪಿ ಕಾರ್ಯಕರ್ತರು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದೆ ನಾಗಪುರದಲ್ಲಿ ವಿಷ್ಣು ಮನೋಹರ ಎಂಬ ಬಾಣಸಿಗ 3 ಸಾವಿರ ಕೇಜಿ ಕಿಚಡಿ ತಯಾರಿಸಿದ್ದರು. ಈಗ ಬಿಜೆಪಿ ಕಾರ್ಯಕ್ರಮದಲ್ಲೂ ಇವರೇ ಮುಖ್ಯ ಅಡುಗೆ ಭಟ್ಟರಾಗಿ ಆಗಮಿಸಿ, ತಮ್ಮದೇ ದಾಖಲೆ ಮುರಿದಿದ್ದಾರೆ.

ಆದರೆ ದಲಿತರ ಈ ಸಮಾವೇಶಕ್ಕೆ ಬಿಜೆಪಿಯ ದಲಿತ ಸಂಸದ ಉದಿತ್‌ ರಾಜ್‌ ಗೈರು ಹಾಜರಾಗಿ ನಾನಾ ಊಹಾಪೋಹಕ್ಕೆ ಕಾರಣರಾದರು.