Asianet Suvarna News Asianet Suvarna News

ಮಗುವಿಗೆ ಪೊಲೀಸ್ ವೆರಿಫಿಕೇಶನ್; ಟೆಕ್ಕಿಗೆ ಸುಷ್ಮಾ ಸ್ವರಾಜ್ ಸ್ಪಂದನೆ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಕ್ಷತಾ ತಮ್ಮ ಎರಡು ತಿಂಗಳ ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯಲು ಶಿವಮೊಗ್ಗ ಕಚೇರಿಯಲ್ಲಿ ಸಲ್ಲಿಸಿದ್ದ ಅರ್ಜಿ ತ್ವರಿತವಾಗಿ ವಿಲೇವಾರಿ ಆಗದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸರಣಿ ಟ್ವೀಟ್ ಮೂಲಕ ಗಮನ ಸೆಳೆದಿದ್ದು, ಅದಕ್ಕೆ ಸಚಿವರು ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಸ್‌ಪೋರ್ಟ್ ಕಚೇರಿಗೂ ಸೂಚನೆ ನೀಡಿದ್ದಾರೆ.

External affairs Minister Sushma Swaraj Respond to tekki

ಬೆಂಗಳೂರು (ಮೇ. 21): ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಕ್ಷತಾ ತಮ್ಮ ಎರಡು ತಿಂಗಳ ಮಗುವಿನ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯಲು ಶಿವಮೊಗ್ಗ ಕಚೇರಿಯಲ್ಲಿ ಸಲ್ಲಿಸಿದ್ದ ಅರ್ಜಿ ತ್ವರಿತವಾಗಿ ವಿಲೇವಾರಿ ಆಗದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸರಣಿ ಟ್ವೀಟ್ ಮೂಲಕ ಗಮನ ಸೆಳೆದಿದ್ದು, ಅದಕ್ಕೆ ಸಚಿವರು ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಸ್‌ಪೋರ್ಟ್ ಕಚೇರಿಗೂ ಸೂಚನೆ ನೀಡಿದ್ದಾರೆ.
 

ಮಗುವಿನ ಪೊಲೀಸ್ ವೆರಿಫಿಕೇಷನ್ ಅಗತ್ಯವಿದೆಯೇ?
ಪೊಲೀಸ್ ಸಿಬ್ಬಂದಿ ನೆರೆಹೊರೆಯವರ ಜತೆ ಮಗುವಿನ ಫೋಟೋ ಬೇಕೆಂದು ಹೇಳುತ್ತಿದ್ದಾರೆ. ಎರಡು ತಿಂಗಳ ಮಗು ಯಾವುದೇ ಕ್ರಿಮಿನಲ್ ಕೇಸು ಹೊಂದಿಲ್ಲ ಎಂದು ವರದಿ ನೀಡಿದ್ದಾರೆ. ಇದು ಆಘಾತಕಾರಿ ಎಂಬ ಅಕ್ಷತಾರ ಅಸಮಾಧಾನವನ್ನು ಸಚಿವರು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಕೆಲವೇ ಗಂಟೆಯಲ್ಲಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಕ್ಷತಾ  ಅವರನ್ನು ಸಂಪರ್ಕಿಸಿ ಪೊಲೀಸ್ ವೆರಿಫಿಕೇಷನ್ ಇಲ್ಲದೆ ಸೋಮವಾರವೇ ಪಾಸ್‌ಪೋರ್ಟ್ ಕಳುಹಿಸಿ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸರಣಿ ಟ್ವೀಟ್: 
ಪಾಸ್‌ಪೋರ್ಟ್ ಪಡೆಯಲು ಆಗುತ್ತಿರುವ ವಿಳಂಬವನ್ನು ಅಕ್ಷತಾ ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಸರಣಿ ಟ್ವೀಟ್ ಮಾಡಿ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನ ಸೆಳೆದಿದ್ದರು. ಮಧ್ಯಾಹ್ನ 12.42 ರ ವೇಳೆಗೆ ಮಾಡಿದ ಮೊದಲ ಟ್ವೀಟ್‌ನಲ್ಲಿ ತಮ್ಮ 2 ತಿಂಗಳ ಮಗುವಿಗಾಗಿ ಪಾಸ್‌ಪೋರ್ಟ್ ಪಡೆಯಲು ಸುಮಾರು ಒಂದೂವರೆ ತಿಂಗಳ ಹಿಂದೆ ಶಿವಮೊಗ್ಗದ ಪಾಸ್‌ಪೋರ್ಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಪೊಲೀಸ್ ವೆರಿಫಿಕೇಷ್ ಪ್ರಕ್ರಿಯೆ ಆರಂಭಿಸಲಾಗಿದೆ. ಜತೆಗೆ ತಮ್ಮ ಪಾಸ್‌ಪೋರ್ಟ್‌ನಲ್ಲಿ ಪತಿಯ ಹೆಸರು ಸೇರ್ಪಡೆ ಮಾಡಿ ತಿದ್ದುಪಡಿ ಮಾಡಬೇಕಿದೆ. ಅದು ಇಷ್ಟು ದಿನವಾದರೂ ಸಾಧ್ಯವಾಗಿಲ್ಲ. ನನಗೆ ನಿರಾಸೆಯಾಗಿದೆ ಎಂದು ಹೇಳಿದ್ದರು.

ನಂತರ ಮತ್ತೆ 12.53ರ ವೇಳೆಗೆ ಟ್ವೀಟ್ ಮಾಡಿ, 2 ತಿಂಗಳ ಮಗುವಿಗೆ ಪೊಲೀಸ್ ವೆರಿಫಿಕೇಷನ್ ಅಗತ್ಯವಿದೆಯೇ? ಪೊಲೀಸ್ ಸಿಬ್ಬಂದಿಯೊಬ್ಬರು ಮನೆಗೆ ಬಂದು ನನ್ನ ನೆರೆಹೊರೆಯವರ ಸಹಿ ಕೇಳುತ್ತಿದ್ದಾರೆ. ಜತೆಗೆ ನೆರೆಹೊರೆಯವರ ಜತೆ ಮಗುವಿನ ಫೋಟೋ ಮನೆಯ ಎದುರು ಬೇಕೆನ್ನುತ್ತಿದ್ದಾರೆ ಎಂದು ಗಮನಕ್ಕೆ ತಂದರು. ಮಧ್ಯಾಹ್ನ 12.56 ಕ್ಕೆ ಮೂರನೇ ಬಾರಿ ಟ್ವೀಟ್ ಮಾಡಿದ ಅಕ್ಷತಾ, ಈಗಾಗಲೇ ಒಂದೂವರೆ ತಿಂಗಳು ಕಾದಿದ್ದೇನೆ. ಎಲ್ಲಾ ಪ್ರಕ್ರಿಯೆ ಮುಗಿಯಲು ಇನ್ನೆಷ್ಟು ದಿನ ಕಾಯಬೇಕೋ ಗೊತ್ತಾಗುತ್ತಿಲ್ಲ. 2 ತಿಂಗಳ ಮಗು ಯಾವುದೇ ಕ್ರಿಮಿನಲ್ ಕೇಸು ಹೊಂದಿಲ್ಲ ಎಂದು ಪೊಲೀಸರು ವರದಿ ನೀಡಬೇಕಿರುವುದು ಆಘಾತಕಾರಿ ಎಂದರು. 

ಮಧ್ಯಾಹ್ನ 1.55 ಕ್ಕೆ ಮಗದೊಮ್ಮೆ ಟ್ವೀಟ್ ಮಾಡಿದ ಅಕ್ಷತಾ, ಟ್ವೀಟ್ ಗಳು ತಮ್ಮ ಗಮನಕ್ಕೆ ಬರುತ್ತವೆ ಎಂದು ಆಶಿಸಿದ್ದೇನೆ ಎಂದು ಹೇಳಿಕೊಂಡರು. ಸಂಜೆ 4.15 ರ ವೇಳೆಗೆ ಅಕ್ಷತಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ‘ಸಂಬಂಧಪಟ್ಟ ಪಾಸ್ ಪೋರ್ಟ್ ಕಚೇರಿ ಯಾವುದು? ನಿಮ್ಮ ಮಾಹಿತಿಗೆ ಕಾಯುತ್ತೇನೆ’ ಎಂದರು.

ಸಂಜೆ 4.23 ಕ್ಕೆ ಪ್ರತಿಕ್ರಿಯೆ ಮಾಡಿದ ಅಕ್ಷತಾ, ಶಿವಮೊಗ್ಗ ಪಾಸ್‌ಪೋರ್ಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ದ್ದೇವೆ. ಅರ್ಜಿಯನ್ನು ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಕಳುಹಿಸಲಾಗಿದೆ ಎಂದರು. ಇದಕ್ಕೆ ಸಂಜೆ 4.48 ಕ್ಕೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಡಿ. ಎಂ. ಮುಲೈ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರತಿ ಕ್ರಿಯಿಸಿ, ಮಗುವಿನ ಪೊಲೀಸ್ ವೆರಿಫಿಕೇಷನ್ ಅಗತ್ಯವಿಲ್ಲ. ಇದನ್ನು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ನಂತರ ಬೆಂಗಳೂರಿನ ಆರ್‌ಪಿಒ ಕಚೇರಿಯಿಂದಲೇ ಸಂಜೆ 4.42 ಕ್ಕೆ ಟ್ವೀಟ್ ಮಾಡಿ ಅಕ್ಷತಾ ಅವರ ದೂರವಾಣಿ ಸಂಖ್ಯೆ, ಫೈಲ್ ಸಂಖ್ಯೆಯನ್ನು ತಿಳಿಸುವಂತೆ ಕೋರಲಾಯಿತು. ಮಧ್ಯಾಹ್ನ 1 ಗಂಟೆಗೆ ಆರಂಭವಾದ ಟ್ವೀಟ್ ಸರಣಿ ಸಂಜೆ 5 ಗಂಟೆಯೊಳಗೆ ತಾರ್ಕಿಕ  ಅಂತ್ಯದೊಂದಿಗೆ ಮುಕ್ತಾಯವಾಯಿತು. 

Follow Us:
Download App:
  • android
  • ios