ನವದೆಹಲಿ[ಜೂ.25]: ವಿದೇಶಾಂಗ ಖಾತೆ ಸಚಿವ ಎಸ್‌.ಜೈಶಂಕರ್‌ ಸೋಮವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ವಿವಿಧ ದೇಶಗಳಲ್ಲಿ ಭಾರತೀಯ ರಾಯಭಾರಿಯಾಗಿ, ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ್ದ ಜೈಶಂಕರ್‌ ಅವರನ್ನು, ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸಂಪುಟ ಸೇರ್ಪಡೆ ವೇಳೆ ಅವರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ಇದೀಗ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಸದ್ಯ ಜೈಶಂಕರ್‌ ಲೋಕಸಭೆ ಅಥವಾ ರಾಜ್ಯಸಭೆ ಸದಸ್ಯರಲ್ಲ. ಹೀಗಾಗಿ ಅವರಿನ್ನು 6 ತಿಂಗಳಲ್ಲಿ ಯಾವುದಾದರೂ ಒಂದು ಸದನದ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯ. ಮೂಲಗಳ ಪ್ರಕಾರ ಗುಜರಾತ್‌ನಿಂದ ಜೈಶಂಕರ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಕಳುಹಿಸಲು ಬಿಜೆಪಿ ನಿರ್ಧರಿಸಿದೆ.