ಹೋಟೆಲ್ ತಿಂಡಿ-ತಿನಿಸಿನ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು (ಜಿಎಸ್‌'ಟಿ) ನ.15ರಿಂದ ಅನ್ವಯವಾಗುವಂತೆ ಶೇ.5ಕ್ಕೆ ಇಳಿಸಿದ ಬಳಿಕವೂ, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಹೋಟೆಲ್‌'ಗಳ ಮೇಲೆ ಕ್ರಮಕ್ಕೆ ಜಿಎಸ್‌'ಟಿ ಅಧಿಕಾರಿಗಳು ಮುಂದಾಗಿದ್ದಾರೆ.
ನವದೆಹಲಿ(ನ.24): ಹೋಟೆಲ್ ತಿಂಡಿ-ತಿನಿಸಿನ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು (ಜಿಎಸ್'ಟಿ) ನ.15ರಿಂದ ಅನ್ವಯವಾಗುವಂತೆ ಶೇ.5ಕ್ಕೆ ಇಳಿಸಿದ ಬಳಿಕವೂ, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವ ಹೋಟೆಲ್'ಗಳ ಮೇಲೆ ಕ್ರಮಕ್ಕೆ ಜಿಎಸ್'ಟಿ ಅಧಿಕಾರಿಗಳು ಮುಂದಾಗಿದ್ದಾರೆ. ಜಿಎಸ್'ಟಿ ದರ ಇಳಿಕೆಗಿಂತ ಮುನ್ನ ಹೋಟೆಲ್'ಗಳಲ್ಲಿ ದರ ಎಷ್ಟಿತ್ತು? ಜಿಎಸ್'ಟಿ ಇಳಿಸಿದ ನಂತರ ಎಷ್ಟಿದೆ ಎಂಬ ಬಗ್ಗೆ ವಿವರ ಸಂಗ್ರಹಿಸಲು ಜಿಎಸ್'ಟಿ ಅಧಿಕಾರಿಗಳು ಆರಂಭಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರಶ್ನಾವಳಿಗಳನ್ನು ಹೋಟೆಲ್'ಗಳಿಗೆ ರಾಜ್ಯ ಜಿಎಸ್'ಟಿ (ಸ್ಟೇಟ್ ಜಿಎಸ್ಟಿ) ಅಧಿಕಾರಿಗಳು ಕಳಿಸುತ್ತಿದ್ದಾರೆ ಎಂದು ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಕೆಲವು ಹೋಟೆಲ್'ಗಳು ಜಿಎಸ್'ಟಿ ದರ ಇಳಿದರೂ ಕೂಡ, ತಿಂಡಿಯ ಮೂಲ ಬೆಲೆಯನ್ನೇ ಏರಿಸಿ ಮೊದಲು ಎಷ್ಟಿತ್ತೋ ಅಷ್ಟೇ ದರವನ್ನು ಉಳಿಸಿಕೊಂಡು ಹೆಚ್ಚಿನ ಲಾಭ ಮಾಡಿಕೊಳ್ಳಲು ಹೊರಟ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಕ್ಷಿ ಸಮೇತ ವರದಿಯಾಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್, ‘ಶೀಘ್ರ ದರ ಕಡಿತದ ಬಗ್ಗೆ ಜಾಹೀರಾತು ನೀಡುತ್ತೇವೆ’ ಎಂದು ಹೇಳಿದೆ.
