ಜಾಮ್‌ನಗರ[ಜೂ.21] : 29 ವರ್ಷಗಳ ಹಿಂದೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣ ಸಂಬಂಧ, ಗುಜರಾತ್‌ನ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 1990ರಲ್ಲಿ ಸಂಜೀವ್‌ ಭಟ್‌, ಜಾಮ್‌ನಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ ಅವರ ರಥಯಾತ್ರೆಗೆ ಅಡ್ಡಿಪಡಿಸಿ ಹಿಂಸಾಚಾರ ನಡೆಸಿದ 150ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದರು.

ಈ ಪೈಕಿ ಪ್ರಭುದಾಸ್‌ ಎಂಬಾತ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಪೊಲೀಸರ ವಶದಲ್ಲಿದ್ದಾಗ ನೀಡಿದ ಕಿರುಕುಳದಿಂದಲೇ ಈ ಸಾವು ಸಂಭವಿಸಿದೆ. ಇದರಲ್ಲಿ ಭಟ್‌ ಪಾತ್ರವೂ ಇದೆ ಎಂದು ಆತನ ಸೋದರ ಕೇಸು ದಾಖಲಿಸಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆದು ಸಂಜೀವ್‌ ಭಟ್‌ ಮತ್ತು ಪೊಲೀಸ್‌ ಕಾನ್ಸ್‌ಟೇಬಲ್‌ ಪ್ರವೀಣ್‌ಸಿನ್‌್ಹಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇತರೆ 5 ಪೊಲೀಸರಿಗೆ ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾದ ಭಟ್‌ ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕರ್ತವ್ಯಲೋಪದ ಮೇಲೆ 2011ರಲ್ಲಿ ಭಟ್‌ರನ್ನು ಹುದ್ದೆಯಿಂದ ಅಮಾನತು ಮಾಡಲಾಗಿತ್ತು. 2015ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಟ್‌ರನ್ನು ಹುದ್ದೆಯಿಂದ ವಜಾ ಮಾಡಿತ್ತು. 2002ರ ಗುಜರಾತ್‌ ಗಲಭೆಯಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಈ ಹಿಂದೆ ಭಟ್‌ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿ ಸುದ್ದಿಯಾಗಿದ್ದರು.